
ಬೆಂಗಳೂರು, 18 ಮೇ (ಹಿ.ಸ.) :
ಆ್ಯಂಕರ್ : ದೇಶದ ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಇಂದು 93ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದ ಅನೇಕ ನಾಯಕರು ದೇವೇಗೌಡರಿಗೆ ಶುಭಾಶಯಗಳನ್ನು ತಿಳಿಸಿ, ಅವರ ದೀರ್ಘ ರಾಜಕೀಯ ಜೀವನ ಮತ್ತು ಸಾರ್ವಜನಿಕ ಸೇವೆಯನ್ನು ಸ್ಮರಿಸಿದ್ದಾರೆ.
ರಾಜಕೀಯದಲ್ಲಿ ಐದು ದಶಕಗಳಿಗಿಂತ ಹೆಚ್ಚು ಕಾಲ ಸಕ್ರಿಯರಾಗಿರುವ ದೇವೇಗೌಡರು, ರೈತರ ಪರ ಹೋರಾಟಗಾರ ಹಾಗೂ ಸರಳ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ದೇಶದ ಪ್ರಧಾನಮಂತ್ರಿವರೆಗೆ ಗಾದಿವರೆಗೆ ಏರಿದ ಅವರು, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ.
1933ರ ಮೇ 18ರಂದು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಜನಿಸಿದ ದೇವೇಗೌಡರು, 1996ರಲ್ಲಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ರೈತರ ಸಮಸ್ಯೆಗಳು, ಗ್ರಾಮೀಣಾಭಿವೃದ್ಧಿ ಹಾಗೂ ಜಲಸಂಪನ್ಮೂಲ ವಿಚಾರಗಳಲ್ಲಿ ವಿಶೇಷ ಕಾಳಜಿ ತೋರಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇಂದ್ರ ಸಚಿವ ಹಾಗೂ ದೇವೇಗೌಡರ ಪುತ್ರ ಕುಮಾರಸ್ವಾಮಿ ತಮ್ಮ ತಂದೆಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
ಎಕ್ಸನಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿರುವ ಅವರು, ಹೋರಾಟ, ಸಂಘರ್ಷ, ತ್ಯಾಗ. ಸಮರ್ಪಣಾ ಭಾವದಿಂದ ರಾಜಕೀಯದ ಉತ್ತುಂಗಕ್ಕೆ ಏರಿದ ಮಣ್ಣಿನಮಗನ ಹೆಜ್ಜೆಗಳು ಅನುಕರಣೀಯ. ಅವರು ತಮ್ಮ ಬದುಕಿನ ಪ್ರತೀಕ್ಷಣವನ್ನು ಜನಸೇವೆಗೆ ಮೀಸಲಿಟ್ಟರು. 94ರ ಈ ವಯಸ್ಸಿನಲ್ಲಿಯೂ ಜನಹಿತಕ್ಕಾಗಿ ಸಂಘರ್ಷದ ಹಾದಿಯನ್ನು ಸವೆಸುತ್ತಿದ್ದಾರೆ. ಅವರ ದಾರಿ ತಲೆತಲೆಮಾರಿಗೂ ಮಾದರಿ. ಆ ಹಿರಿಯ ಜೀವಕ್ಕೆ ಭಗವಂತ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನೂ ಸುದೀರ್ಘ ಕಾಲ ರಾಷ್ಟ್ರಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.