ಭಾರಿ ಗಾಳಿ–ಗುಡುಗು ಮಳೆಗೆ ಗದಗ ಜಿಲ್ಲೆ ತತ್ತರ
ಗದಗ, 18 ಮೇ (ಹಿ.ಸ.) : ಆ್ಯಂಕರ್ : ಭಾರಿ ಗಾಳಿ, ಗುಡುಗು ಸಹಿತ ಸುರಿದ ಮಳೆಯ ಅಬ್ಬರಕ್ಕೆ ಗದಗ ಜಿಲ್ಲೆ ತತ್ತರಿಸಿ ಹೋಗಿದೆ. ಸಂಜೆ ಸುರಿದ ಗಾಳಿ–ಮಳೆಗೆ ಜಿಲ್ಲೆಯಲ್ಲಿ ಹತ್ತಾರು ಅವಾಂತರಗಳು ಸಂಭವಿಸಿವೆ. ಗದಗ ತಾಲೂಕಿನ ಹೊಸೂರ ಗ್ರಾಮದಲ್ಲಿ ಮನೆಗಳು, ಶಾಲೆಗಳ ಮೇಲ್ಚಾವಣಿ ಶೀಟುಗಳು ಹಾರಿ ಹೋಗಿದ್ದು, ತಾಯಿ
ಫೋಟೋ


ಗದಗ, 18 ಮೇ (ಹಿ.ಸ.) :

ಆ್ಯಂಕರ್ : ಭಾರಿ ಗಾಳಿ, ಗುಡುಗು ಸಹಿತ ಸುರಿದ ಮಳೆಯ ಅಬ್ಬರಕ್ಕೆ ಗದಗ ಜಿಲ್ಲೆ ತತ್ತರಿಸಿ ಹೋಗಿದೆ. ಸಂಜೆ ಸುರಿದ ಗಾಳಿ–ಮಳೆಗೆ ಜಿಲ್ಲೆಯಲ್ಲಿ ಹತ್ತಾರು ಅವಾಂತರಗಳು ಸಂಭವಿಸಿವೆ. ಗದಗ ತಾಲೂಕಿನ ಹೊಸೂರ ಗ್ರಾಮದಲ್ಲಿ ಮನೆಗಳು, ಶಾಲೆಗಳ ಮೇಲ್ಚಾವಣಿ ಶೀಟುಗಳು ಹಾರಿ ಹೋಗಿದ್ದು, ತಾಯಿ–ಮಗ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮತ್ತೊಂದೆಡೆ ರಸ್ತೆ ತುಂಬಾ ಬೃಹತ್ ಮರಗಳು ಧರೆಗುರುಳಿದ ಪರಿಣಾಮ ಬಸ್ ಸಂಚಾರ ಕೂಡ ಸ್ಥಗಿತಗೊಂಡಿದೆ.

ಗದಗ ಜಿಲ್ಲೆಯಲ್ಲಿ ಸುರಿದ ಭಾರಿ ಗಾಳಿ, ಗುಡುಗು ಸಹಿತ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಸಂಜೆ ಏಕಾಏಕಿ ಆರಂಭವಾದ ಗಾಳಿ–ಮಳೆಯ ಅಬ್ಬರಕ್ಕೆ ಗದಗ ತಾಲೂಕಿನ ಹೊಸೂರ ಗ್ರಾಮ ತತ್ತರಿಸಿ ಹೋಗಿದೆ.

ಭಾರೀ ಗಾಳಿಯ ಹೊಡೆತಕ್ಕೆ ಗ್ರಾಮದ ಸರ್ಕಾರಿ ಶಾಲೆ ಸೇರಿದಂತೆ ಹಲವು ಮನೆಗಳ ಮೇಲ್ಛಾವಣಿಯ ತಗಡು ಶೀಟುಗಳು ಹಾರಿ ಹೋಗಿವೆ. ಗಾಳಿಯ ರಭಸಕ್ಕೆ ಮನೆಗಳ ಮೇಲ್ಚಾವಣಿಗಳು ಕಿತ್ತು ಬಿದ್ದ ಪರಿಣಾಮ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಇನ್ನೂ ಹೊಸೂರ ಗ್ರಾಮದಲ್ಲಿ ತಾಯಿ ಮತ್ತು ಮಗ ಜಸ್ಟ್ ಮಿಸ್ ಆಗಿರುವ ಘಟನೆ ನಡೆದಿದೆ. ಮನೆಯ ಮೇಲ್ಛಾವಣಿಯ ತಗಡುಗಳಿಂದ ದೊಡ್ಡ ಶಬ್ದ ಬರುತ್ತಿರುವುದನ್ನು ಕೇಳಿದ ತಾಯಿ ತನ್ನ ಮಗನೊಂದಿಗೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅವರು ಹೊರಗೆ ಬಂದ ಕೆಲ ಕ್ಷಣಗಳಲ್ಲೇ ತಗಡುಗಳು ಹಾರಿ ಬಿದ್ದಿವೆ. ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಇದರ ಜೊತೆಗೆ ಭಾರಿ ಮಳೆಗೆ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತಾರು ಬೃಹತ್ ಮರಗಳು ಧರೆಗುರುಳಿವೆ. ರಸ್ತೆ ತುಂಬೆಲ್ಲಾ ಮರಗಳು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ವಿಶೇಷವಾಗಿ ಹೊಸೂರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮರಗಳು ಬಿದ್ದ ಕಾರಣ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಅಲ್ಲದೆ ರಸ್ತೆಗೆ ಬಿದ್ದ ಮರಗಳ ತೆರವು ಕಾರ್ಯ ವಿಳಂಬವಾಗಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಸಾಕಷ್ಟು ಸಮಯ ಕಳೆದರೂ ಗ್ರಾಮ ಪಂಚಾಯತ್ ಆಡಳಿತ ಸ್ಥಳಕ್ಕೆ ಬಂದು ಮರಗಳ ತೆರವು ಕಾರ್ಯ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಳೆ ಅವಾಂತರದಿಂದ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜನರು ಭಯದ ವಾತಾವರಣದಲ್ಲೇ ಕಾಲ ಕಳೆಯುವಂತಾಗಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande