ಗಾಳಿ, ಮಳೆಗೆ ಶೆಡ್ ಮೇಲ್ಛಾವಣಿ ಹಾರಿ ಸಂಕಷ್ಟದಲ್ಲಿ ವೃದ್ದ ದಂಪತಿ
ಉಂಟಾಗಿದೆ
ಫೋಟೋ


ಗದಗ, 18 ಮೇ (ಹಿ.ಸ.) :

ಆ್ಯಂಕರ್ : ಗದಗ ನಗರದಲ್ಲಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಶೆಡ್ ಒಂದರ ಮೇಲ್ಛಾವಣಿ ಹಾರಿ ಹೋಗಿದ್ದು, ಕಳೆದ ಆರು ವರ್ಷಗಳಿಂದ ಅದೇ ಶೆಡ್ ನಲ್ಲಿ ವಾಸವಾಗಿದ್ದ ವೃದ್ದ ದಂಪತಿ ಸಂಕಷ್ಟಕ್ಕೆ ಸಿಲುಕಿರುವ ಘಟನೆ ನಡೆದಿದೆ.

ನಗರದ ಮುಂಡರಗಿ ರಸ್ತೆಯಲ್ಲಿರುವ ಲೇಔಟ್ ಪ್ರದೇಶದಲ್ಲಿ ವಾಸವಾಗಿರುವ ಕಳಕಪ್ಪ ಹಾಗೂ ಫಕ್ಕೀರಮ್ಮ ದಂಪತಿ ಇದೀಗ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.

ಸ್ವಚ್ಚತಾ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ವೃದ್ದ ದಂಪತಿ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆ ಕಳೆದ ಆರು ವರ್ಷಗಳಿಂದ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು.

ಆದರೆ, ನಿನ್ನೆ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ಶೆಡ್ ತಗಡುಗಳು ಹಾರಿ ಹೋಗಿದ್ದು, ಕ್ಷಣಾರ್ಧದಲ್ಲೇ ದಂಪತಿಯ ಆಶ್ರಯ ಕುಸಿದಂತಾಗಿದೆ. ಘಟನೆಯ ವೇಳೆ ಶೆಡ್ ಒಳಗಿದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದು, ದೊಡ್ಡ ಅನಾಹುತ ತಪ್ಪಿದೆ. ಆದರೆ ಶೆಡ್ನಲ್ಲಿದ್ದ ದವಸ-ಧಾನ್ಯ, ಮನೆ ಬಳಕೆಯ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳು ಮಳೆಗೆ ಹಾನಿಗೊಳಗಾಗಿ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆಯಿಂದಾಗಿ ರಾತ್ರಿ ಪೂರ್ತಿ ಆತಂಕದಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದ್ದು, ಇದೀಗ ವಾಸಕ್ಕೆ ಸೂಕ್ತ ಆಶ್ರಯವಿಲ್ಲದೇ ದಂಪತಿ ಕಣ್ಣೀರಿನ ಬದುಕು ನಡೆಸುತ್ತಿದ್ದಾರೆ. ಬದುಕಿನ ಕೊನೆಯ ಹಂತದಲ್ಲಿ ಇಂತಹ ಸಂಕಷ್ಟ ಎದುರಾಗಿರುವುದರಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ನೆರವಿಗೆ ಬರಬೇಕೆಂದು ಅವರು ಮನವಿ ಮಾಡಿದ್ದಾರೆ.

“ನಾವು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಗಾಳಿ ಮಳೆಗೆ ನಮ್ಮ ಶೆಡ್ ಸಂಪೂರ್ಣ ಹಾನಿಯಾಗಿದೆ. ಮನೆಯ ಮೇಲ್ಚಾವಣಿ ಹಾರಿ ಹೋಗಿದ್ದು, ದವಸ ಧಾನ್ಯವೂ ಹಾಳಾಗಿದೆ. ಸರ್ಕಾರ ಪರಿಹಾರ ನೀಡಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಬೇಕು” ಎಂದು ವೃದ್ದ ದಂಪತಿ ಅಳಲು ತೋಡಿಕೊಂಡಿದ್ದಾರೆ.

ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಈ ಬಡ ವೃದ್ದ ದಂಪತಿಗೆ ತಕ್ಷಣ ಪರಿಹಾರ ಹಾಗೂ ಅಗತ್ಯ ನೆರವು ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande