ಧಾರವಾಡ ಜಿಲ್ಲಾ ಆಸ್ಪತ್ರೆ ಕಾರ್ಯವೈಖರಿ ಶ್ಲಾಘಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
ಧಾರವಾಡ, 18 ಮೇ (ಹಿ.ಸ.) : ಆ್ಯಂಕರ್ : ಸಾರ್ವಜನಿಕರಿಂದ ಸಾಮಾನ್ಯವಾಗಿ ಜಿಲ್ಲಾ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ದೂರುಗಳು ಕೇಳಿಬರುತ್ತವೆ. ಆದರೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅಲ್ಲಿನ ಸೇವಾ ಮನೋಭಾವ ಮತ್ತು ವೈದ್ಯಕೀಯ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗ
Visit


ಧಾರವಾಡ, 18 ಮೇ (ಹಿ.ಸ.) :

ಆ್ಯಂಕರ್ : ಸಾರ್ವಜನಿಕರಿಂದ ಸಾಮಾನ್ಯವಾಗಿ ಜಿಲ್ಲಾ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ದೂರುಗಳು ಕೇಳಿಬರುತ್ತವೆ. ಆದರೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅಲ್ಲಿನ ಸೇವಾ ಮನೋಭಾವ ಮತ್ತು ವೈದ್ಯಕೀಯ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

ಧಾರವಾಡ ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ-ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯರು, ಪುರುಷರು ಮತ್ತು ಅವರ ಸಂಬಂಧಿಕರೊಂದಿಗೆ ಮಾತನಾಡಿ ವೈದ್ಯಕೀಯ ಸೇವೆ, ಸಿಬ್ಬಂದಿಗಳ ಸ್ಪಂದನೆ ಹಾಗೂ ಉಚಿತ ಔಷಧಿ ವಿತರಣೆಯ ಕುರಿತು ಮಾಹಿತಿ ಪಡೆದುಕೊಂಡರು.

ಹೆರಿಗೆ ವಿಭಾಗಕ್ಕೆ ಭೇಟಿ ನೀಡಿದ ವೇಳೆ ಬಾಣಂತಿಯರೊಂದಿಗೆ ಸಂವಾದ ನಡೆಸಿ, ಆಸ್ಪತ್ರೆಯ ಸೌಲಭ್ಯಗಳು ಹಾಗೂ ವೈದ್ಯರ ಸೇವೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. “ತಾಯಿ ಮತ್ತು ಮಗುವಿನ ಜೀವ ಉಳಿಸುವುದು ಅತ್ಯಂತ ಮಹತ್ವದ ಕಾರ್ಯ. ಧಾರವಾಡ ಜಿಲ್ಲಾ ಆಸ್ಪತ್ರೆಯ ವೈದ್ಯರು ಅದನ್ನು ಅತ್ಯಂತ ಕಾಳಜಿಯಿಂದ ನಿರ್ವಹಿಸುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ 550 ಸುರಕ್ಷಿತ ಹೆರಿಗೆಗಳನ್ನು ನಡೆಸಿದ್ದು, ಅದರಲ್ಲಿ 82 ಗಂಭೀರ ಪ್ರಕರಣಗಳಲ್ಲಿ ತಾಯಿ ಮತ್ತು ಮಗುವಿನ ಜೀವ ಉಳಿಸಿರುವುದು ಶ್ಲಾಘನೀಯ” ಎಂದು ಹೇಳಿದರು.

ಇದೇ ವೇಳೆ ಸಖಿ ಒನ್ ಸ್ಟಾಪ್ ಕೇಂದ್ರಕ್ಕೂ ಭೇಟಿ ನೀಡಿದ ಅವರು, ದಾಖಲೆಗಳನ್ನು ಪರಿಶೀಲಿಸಿ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು. ಸಾರ್ವಜನಿಕರಲ್ಲಿ ಸಖಿ ಕೇಂದ್ರದ ಕುರಿತು ಅರಿವು ಮೂಡಿಸಲು ಮುಂದಿನ ದಿನಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಂಬಂಧಿಸಿದ 83 ಪೋಕ್ಸೋ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಿದ ಅವರು, “ಇವುಗಳಲ್ಲಿ 12 ಬಾಲಕಿಯರಿಗೆ ಬಾಲ್ಯವಿವಾಹವಾಗಿದ್ದು, ಗರ್ಭಿಣಿಯಾಗಿದ್ದಾರೆ. 33 ಅಪ್ರಾಪ್ತ ಬಾಲಕಿಯರು ಅತ್ಯಾಚಾರಕ್ಕೊಳಗಾಗಿ ತಾಯಿಯಾಗಿದ್ದಾರೆ. 22 ಬಾಲಕಿಯರು ಅನಿಚ್ಛಿತ ಗರ್ಭಧಾರಣೆಯಿಂದ ಗರ್ಭಪಾತಕ್ಕೆ ಒಳಪಟ್ಟಿದ್ದಾರೆ. ಇಂತಹ ಅಮಾನವೀಯ ಘಟನೆಗಳು ಸಮಾಜದಲ್ಲಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ” ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಡಿ-ಗ್ರೂಪ್ ಸಿಬ್ಬಂದಿ, ನರ್ಸ್ಗಳು ಹಾಗೂ ವೈದ್ಯರ ಕೊರತೆ ಇರುವ ಕುರಿತು ಮಾಹಿತಿ ಪಡೆದಿದ್ದೇನೆ. ಜೊತೆಗೆ ಸ್ಕ್ಯಾನಿಂಗ್ ಸೌಲಭ್ಯಗಳ ಕೊರತೆಯೂ ಇದೆ. ಈ ಎಲ್ಲ ವಿಚಾರಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆಗೆ ಭೇಟಿ ಸಂದರ್ಭದಲ್ಲಿ ಸಾರ್ವಜನಿಕರಿಂದ ಹಲವಾರು ಮನವಿಗಳು ಸ್ವೀಕರಿಸಲಾಗಿದ್ದು, ಅವುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande