ಪ್ರಹ್ಲಾದ್ ಜೋಷಿ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಆಕ್ರೋಶ
ಬೆಂಗಳೂರು, 18 ಮೇ (ಹಿ.ಸ.) : ಆ್ಯಂಕರ್ : ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮಹಮ್ಮದ್ ಅಲಿ ಜಿನ್ನಾಗೆ ಹೋಲಿಕೆ ಮಾಡಿರುವುದಾಗಿ ಆರೋಪಿಸಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ
ಬಿ.ಕೆ.ಹರಿಪ್ರಸಾದ


ಬೆಂಗಳೂರು, 18 ಮೇ (ಹಿ.ಸ.) :

ಆ್ಯಂಕರ್ : ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮಹಮ್ಮದ್ ಅಲಿ ಜಿನ್ನಾಗೆ ಹೋಲಿಕೆ ಮಾಡಿರುವುದಾಗಿ ಆರೋಪಿಸಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ದೇಶವನ್ನೇ ವಿಭಜನೆಯ ದುರಂತಕ್ಕೆ ತಳ್ಳಿದ ಮಹಮ್ಮದ್ ಅಲಿ ಜಿನ್ನಾ ಜೊತೆ ದೇಶದ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರನ್ನು ಹೋಲಿಕೆ ಮಾಡುವುದು ರಾಜಕೀಯ ದ್ರಷ್ಟ್ಯತೆ, ಇತಿಹಾಸದ ಅಜ್ಞಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ದುರ್ಬುದ್ಧಿಯನ್ನು ತೋರಿಸುತ್ತದೆ” ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

ದೇಶದ ಐಕ್ಯತೆ, ಅಖಂಡತೆ ಮತ್ತು ಸ್ವಾತಂತ್ರ್ಯಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಪಾರ ತ್ಯಾಗ ಮಾಡಿದೆ. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜೈಲು ಸೇರಿದ್ದು, ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ಪಕ್ಷದ ನಾಯಕರನ್ನು ಜಿನ್ನಾಗೆ ಹೋಲಿಸುವ ಮೂಲಕ ಬಿಜೆಪಿ ತನ್ನ ರಾಜಕೀಯ ದಿವಾಳಿತನವನ್ನು ಬಹಿರಂಗಪಡಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಅವಿಭಜಿತ ಬಂಗಾಳದಲ್ಲಿ ಮುಸ್ಲಿಂ ಲೀಗ್ ಜೊತೆ ಜನಸಂಘದ ಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿ ಮೈತ್ರಿ ಸರ್ಕಾರ ನಡೆಸಿದ ಇತಿಹಾಸವನ್ನು ಬಿಜೆಪಿ ಮರೆತಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಜಿನ್ನಾ ಕುರಿತು ಲಾಲ್ ಕೃಷ್ಣ ಅಡ್ವಾನಿ ನೀಡಿದ್ದ ಹೇಳಿಕೆಗಳನ್ನೂ ಉಲ್ಲೇಖಿಸಿರುವ ಹರಿಪ್ರಸಾದ್, ಬಿಜೆಪಿಯ ಹಲವಾರು ನಾಯಕರಿಂದ ಜಿನ್ನಾ ಕುರಿತ ಮೃದು ನಿಲುವುಗಳು ವ್ಯಕ್ತವಾಗಿದ್ದವು ಎಂದು ಟೀಕಿಸಿದ್ದಾರೆ.

ದೇಶ ಎದುರಿಸುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ ಮತ್ತು ಆರ್ಥಿಕ ಅಸ್ಥಿರತೆ ಮುಂತಾದ ನೈಜ ಸಮಸ್ಯೆಗಳ ಬಗ್ಗೆ ಉತ್ತರಿಸಲು ಸಾಧ್ಯವಾಗದ ಬಿಜೆಪಿ ನಾಯಕರು ಜನರ ಗಮನ ಬೇರೆಡೆ ಸೆಳೆಯಲು ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ರಾಹುಲ್ ಗಾಂಧಿ ದೇಶದ ಜನರನ್ನು ಒಗ್ಗೂಡಿಸುವ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮಾತ್ರ ಸಮಾಜವನ್ನು ಜಾತಿ, ಧರ್ಮ ಮತ್ತು ದ್ವೇಷದ ಆಧಾರದಲ್ಲಿ ವಿಭಜಿಸುವ ರಾಜಕಾರಣ ನಡೆಸುತ್ತಿದೆ” ಎಂದು ಹರಿಪ್ರಸಾದ್ ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಮೊದಲು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅಧ್ಯಯನ ಮಾಡಲಿ. ಅದು ಸಾಧ್ಯವಾಗದಿದ್ದರೆ ಕನಿಷ್ಠ ಬಿಜೆಪಿಯ ರಾಜಕೀಯ ಪೂರ್ವ ಇತಿಹಾಸವನ್ನಾದರೂ ಓದಲಿ. ಆಗ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ತಾತ್ವಿಕ ಹಾಗೂ ತ್ಯಾಗದ ಅಂತರ ಅರ್ಥವಾಗುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande