
ಕೊಪ್ಪಳ, 18 ಮೇ (ಹಿ.ಸ.) :
ಆ್ಯಂಕರ್ : ಕೊಪ್ಪಳ ನಗರಸಭೆಯ ವ್ಯಪ್ತಾಯಲ್ಲಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಿಯಮ ಜಾರಿ ಮಾಡಲಾಗಿದೆ.
ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮಗಳು-2026ನ್ನು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆ ಹೊರಡಿಸಿರುವಂತೆ ಈ ಕೆಳಕಾಣಿಸಿದಂತೆ ಅಧಿಕೃತವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬಂದಿರುತ್ತದೆ.
ಕೊಪ್ಪಳ ನಗರಸಭೆ ವ್ಯಾಪ್ತಿಯ ವಾರ್ಡ್ಗಳಲ್ಲಿನ ಸಾರ್ವಜನಿಕರು ನಾಲ್ಕು ರೀತಿಯ ತ್ಯಾಜ್ಯಗಳಾದ ಹಸಿ ತ್ಯಾಜ್ಯ ಒಣ ತ್ಯಾಜ್ಯ, ಸ್ಮಾನಿಟರಿ ತ್ಯಾಜ್ಯಗಳು ಹಾಗೂ ವಿಶೇಷರೀತಿಯ ತ್ಯಾಜ್ಯಗಳು (ಬಲ್ಸ್ಗಳು, ಬ್ಯಾಟರಿಗಳು, ಅವಧಿ ಮೀರಿದ ಔಷಧಗಳು, ಪೇಂಟ್ ಡಬ್ಬಿಗಳು, ಇತ್ಯಾದಿ) ವಿಂಗಡಣೆಯನ್ನು ಕಡ್ಡಾಯವಾಗಿ ಮಾಡಬೇಕು.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಉದ್ದಿಮೆದಾರರು, ಕಲ್ಯಾಣ ಮಂಟಪದ ವ್ಯವಸ್ಥಾಪಕರು, ಬಾರ್ & ರೆಸ್ಟೋರೆಂಟ್ ಮಾಲೀಕರು ಮತ್ತು ಇತರೆ ಉದ್ದಿಮೆದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಘನತಾಜ್ಯ ವಸ್ತು ನಿರ್ವಹಣಾ ನಿಯಮಗಳು-2026ರನ್ವಯ 100 ಕೆ.ಜಿ ತ್ಯಾಜ್ಯ ಅಥವಾ 40 ಸಾವಿರ ಲೀ. ನೀರು ಅಥವಾ 20 ಸಾವಿರ ಚ.ಮೀ ಗಿಂತ ಹೆಚ್ಚಿನ ವಿಸ್ತೀರ್ಣವುಳ್ಳ ವಾಣಿಜ್ಯ ಪ್ರದೇಶವುಳ್ಳವರು ಇನ್ನುಮುಂದೆ ಬೃಹತ್ ತ್ಯಾಜ್ಯ ಉತ್ಪಾದಕರು ((BWGs) ) ಎಂದು ಘೋಷಿಸಲಾಗಿದೆ.
ಬೃಹತ್ ತ್ಯಾಜ್ಯ ಉತ್ಪಾದಕರು, ತಮ್ಮ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸ್ಥಳದಲ್ಲಿಯೇ (In-Situ) ಸಂಸ್ಕರಿಸಬೇಕು. ತ್ಯಾಜ್ಯ ಸಂಸ್ಕರಣಾ ಸೌಲಭ್ಯವು ಲಭ್ಯವಿಲ್ಲದಿದ್ದಲ್ಲಿ ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ತ್ಯಾಜ್ಯಗಳನ್ನು ವಿಂಗಡಿಸಿ ನೀಡಬೇಕು ಹಾಗೂ ನಗರಸಭೆಯು ನಿಗದಿಪಡಿಸಿದ ಶುಲ್ಕವನ್ನು ಪಾವತಿಸಬೇಕು.
ಈ ನಿಯಮಗಳನ್ನು ಉಲ್ಲಂಘಿಸುವ ಕಲ್ಯಾಣ ಮಂಟಪ, ಬಾರ್, ರೆಸ್ಟೋರೆಂಟ್, ಹೋಟೆಲ್ ಇತರರ ವಿರುದ್ಧ ನೀರು ಅಥವಾ ವಿದ್ಯುತ್ ಸೇವೆಗಳನ್ನು ಸ್ಥಗಿತಗೊಳಿಸುವುದು. ಇದಲ್ಲದೆ ಇತರ ಕಠಿಣ ಕ್ರಮಗಳನ್ನು ಸಹ ಕೈಗೊಳ್ಳಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್