ಮಧ್ಯ ಪ್ರದೇಶದಲ್ಲಿ ರೈಲಿಗೆ ಬೆಂಕಿ ; 68 ಪ್ರಯಾಣಿಕರ ಸುರಕ್ಷಿತ ರಕ್ಷಣೆ
Rail fire


ಭೋಪಾಲ್, 17 ಮೇ (ಹಿ.ಸ.) :

ಆ್ಯಂಕರ್ : ಮಧ್ಯ ಪ್ರದೇಶದ ರತ್ಲಂ ಜಿಲ್ಲೆಯ ಅಲೋಟ್ ಪ್ರದೇಶದ ಬಳಿ ಭಾನುವಾರ ಮುಂಜಾನೆ ರಾಜಧಾನಿ ರೈಲಿನ ಬಿ-1 ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲಕಾಲ ಆತಂಕದ ವಾತಾವರಣ ಉಂಟಾಯಿತು.

ಕೇರಳದ ತಿರುವನಂತಪುರಂನಿಂದ ದೆಹಲಿಯ ಹಜರತ್ ನಿಜಾಮುದ್ದೀನ್ ಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲು ಸಂಖ್ಯೆ 12431ರಲ್ಲಿ ಈ ಅವಘಡ ಸಂಭವಿಸಿದೆ. ಲೂನಿ ರೀಚಾ ಮತ್ತು ವಿಕ್ರಮ್ ಗಡ್ ಅಲೋಟ್ ನಿಲ್ದಾಣಗಳ ನಡುವೆ ಮುಂಜಾನೆ 5.15ರಿಂದ 5.30ರ ಅವಧಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನ ಬಿ-1 ಬೋಗಿಯಿಂದ ಹೊಗೆ ಮತ್ತು ಬೆಂಕಿಯ ಜ್ವಾಲೆ ಹೊರಬರುತ್ತಿರುವುದನ್ನು ಮೊದಲು ಕಾವಲುಗಾರರು ಗಮನಿಸಿದ್ದು, ತಕ್ಷಣವೇ ಲೋಕೋ ಪೈಲಟ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಲಾಯಿತು.

ರೈಲ್ವೆ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಸುಮಾರು 15 ನಿಮಿಷಗಳಲ್ಲಿ ಎಲ್ಲಾ 68 ಪ್ರಯಾಣಿಕರನ್ನು ಸುರಕ್ಷಿತವಾಗಿ ಬೇರೆ ಬೋಗಿಗಳಿಗೆ ಸ್ಥಳಾಂತರಿಸಿದರು.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಬೆಂಕಿಯಿಂದ ಬಿ-1 ಬೋಗಿಗೆ ತೀವ್ರ ಹಾನಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ರಕ್ಷಣಾ ಕಾರ್ಯಾಚರಣೆ ತೀವ್ರ

ಮಾಹಿತಿ ಸಿಕ್ಕ ತಕ್ಷಣ ರತ್ಲಂ ರೈಲ್ವೆ ವಿಭಾಗದಿಂದ ಅಪಘಾತ ಪರಿಹಾರ ರೈಲು, ವೈದ್ಯಕೀಯ ಪರಿಹಾರ ಘಟಕ ಹಾಗೂ ಟವರ್ ವ್ಯಾಗನ್ಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ರತ್ಲಂ ವಿಭಾಗದ ಡಿಆರ್ಎಂ ಅಶ್ವಿನಿ ಕುಮಾರ್ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದರು.

ರಕ್ಷಣಾ ಕಾರ್ಯಾಚರಣೆಯ ವೇಳೆ ಹಾನಿಗೊಳಗಾದ ಬೋಗಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಬೆಂಕಿ ಇತರ ಬೋಗಿಗಳಿಗೆ ಹರಡದಂತೆ ಪ್ರತ್ಯೇಕಿಸಲಾಯಿತು.

ಈ ಅವಘಡದಿಂದ ದೇಶದ ಅತ್ಯಂತ ಕಾರ್ಯನಿರತ ರೈಲು ಮಾರ್ಗಗಳಲ್ಲಿ ಒಂದಾದ ದೆಹಲಿ–ಮುಂಬೈ ಮಾರ್ಗದ ಸಂಚಾರಕ್ಕೂ ಪರಿಣಾಮ ಬೀರಿತು. ಭದ್ರತಾ ಕಾರಣಗಳಿಂದ ಕೆಲಕಾಲ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

ಮುಂಬೈ ಸೆಂಟ್ರಲ್–ಜೈಪುರ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಸೇರಿ ಹಲವು ರೈಲುಗಳನ್ನು ವಿವಿಧ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಹಳಿಗಳ ಪುನಃಸ್ಥಾಪನೆ ಮತ್ತು ಸಂಚಾರ ಸಾಮಾನ್ಯಗೊಳಿಸಲು ರೈಲ್ವೆ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.

ಬಿ-1 ಬೋಗಿಯ ಪ್ರಯಾಣಿಕರಿಗೆ ರೈಲ್ವೆ ಆಡಳಿತವು ತಕ್ಷಣವೇ ಉಪಾಹಾರ, ಕುಡಿಯುವ ನೀರು ಹಾಗೂ ಪರ್ಯಾಯ ಆಸನ ವ್ಯವಸ್ಥೆ ಕಲ್ಪಿಸಿತು. ಪ್ರಯಾಣಿಕರನ್ನು ಕೋಟಾ ಮೂಲಕ ದೆಹಲಿಗೆ ಕಳುಹಿಸಲು ಹೆಚ್ಚುವರಿ ಬೋಗಿ ಜೋಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ. ಆದರೆ ನಿಖರ ಕಾರಣ ಪತ್ತೆ ಮಾಡಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಹಿರಿಯ ಡಿಸಿಎಂ ಸೌರಭ್ ಜೈನ್ ಮಾತನಾಡಿ, “ತಾಂತ್ರಿಕ ದೋಷವೇ ಅಥವಾ ಬೇರೆ ಕಾರಣವೇ ಎಂಬುದನ್ನು ತನಿಖೆ ಬಳಿಕ ಸ್ಪಷ್ಟಪಡಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande