ಕೃಷಿ ಹೊಂಡದಲ್ಲಿ ಮುಳುಗಿ ಮುವರ ಸಾವು : ಬೇಲಿ ಹಾಕಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಆದೇಶ
ಕೃಷಿ ಹೊಂಡದಲ್ಲಿ ಮುಳುಗಿ ಮುವರ ಸಾವು: ಬೇಲಿ ಹಾಕಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಆದೇಶ
ಮಾಲೂರು ತಾಲ್ಲೂಕಿನ ನಕ್ಕನಹಳ್ಳಿ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ತಂದೆ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.


ಕೋಲಾರ, ಮೇ ೧೭(ಹಿ.ಸ) :

ಆ್ಯಂಕರ್ : ಜಿಲ್ಲೆಯಲ್ಲಿ ಕೃಷಿ ಹೊಂಡಗಳು ಕೃಷಿಕರ ಪಾಲಿಗೆ ವರದಾನವಾಗುವ ಬದಲು ಸಾವಿನ ಕೂಪಗಳಾಗಿ ಪರಿಣಮಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ರೈತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಅವರು, ಮುಂದಿನ ಒಂದು ವಾರದೊಳಗೆ ಹೊಂಡಗಳಿಗೆ ಸುರಕ್ಷಿತ ಬೇಲಿ ಅಳವಡಿಸದಿದ್ದರೆ ಅಂತಹ ಹೊಂಡಗಳನ್ನು ಸರ್ಕಾರವೇ ಮುಚ್ಚಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳು ಆಟವಾಡುತ್ತಾ ಅಥವಾ ಈಜಲು ಹೋಗಿ ಕೃಷಿ ಹೊಂಡಗಳಲ್ಲಿ ಮುಳುಗಿ ಮೃತಪಡುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿವೆ. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ರೈತರ ಅಭಿವೃದ್ಧಿಗಾಗಿ ಸರ್ಕಾರ ಕೃಷಿ ಹೊಂಡಗಳನ್ನು ನೀಡಿದೆ. ಆದರೆ, ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಅಮಾಯಕ ಮಕ್ಕಳ ಸಾವಿಗೆ ಕಾರಣವಾಗುವುದು ಅಕ್ಷಮ್ಯ ಅಪರಾಧ. ಕೃಷಿ ಹೊಂಡ ನಿರ್ಮಿಸಿದ ರೈತರು ಅದರ ಸುತ್ತ ಬೇಲಿ ಹಾಕುವುದು ಅವರ ಆದ್ಯ ಕರ್ತವ್ಯ, ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವ ರೈತರು ಮುಂದಿನ ೭ ದಿನಗಳ ಒಳಗಾಗಿ ತಮ್ಮ ಕೃಷಿ ಹೊಂಡಕ್ಕೆ ತಂತಿ ಬೇಲಿ ಅಥವಾ ರಕ್ಷಣಾ ಗೋಡೆ ನಿರ್ಮಿಸುವುದಿಲ್ಲವೋ, ಅಂತಹ ಹೊಂಡಗಳನ್ನು ಕೃಷಿ ಇಲಾಖೆಯ ಮೂಲಕ ಮುಲಾಜಿಲ್ಲದೆ ಮುಚ್ಚಲು ಕ್ರಮ ವಹಿಸಲಾಗುವುದು, ಎಂದು ಡಿಸಿ ಸ್ಪಷ್ಟಪಡಿಸಿದರು.

ಪ್ರತಿ ಗ್ರಾಮ ಮಟ್ಟದಲ್ಲಿ ಕೃಷಿ ಅಧಿಕಾರಿಗಳು ಹೊಂಡಗಳ ಪರಿಶೀಲನೆ ನಡೆಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕೂಡ ಸೂಚನೆ ನೀಡಲಾಗಿದೆ. ಕೇವಲ ಬೇಲಿ ಮಾತ್ರವಲ್ಲದೆ, ಹೊಂಡಕ್ಕೆ ಇಳಿಯದಂತೆ ಎಚ್ಚರಿಕೆ ಫಲಕಗಳನ್ನು ಹಾಕಬೇಕು ಮತ್ತು ಹೊಂಡದ ಪ್ಲಾಸ್ಟಿಕ್ ಶೀಟ್ ಜಾರುವಂತಿರುವುದರಿ0ದ ಯಾರೂ ಅದರಲ್ಲಿ ಇಳಿಯದಂತೆ ಹೆಚ್ಚು ಜಾಗರೂಕತೆ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತವು ಕೃಷಿ ಚಟುವಟಿಕೆಗಳಿಗೆ ಸರ್ವ ರೀತಿಯ ಸಹಕಾರ ನೀಡಲಿದೆ. ಆದರೆ ಸಾರ್ವಜನಿಕರ, ವಿಶೇಷವಾಗಿ ಮಕ್ಕಳ ಪ್ರಾಣದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಜೀವ ಹೋದ ಮೇಲೆ ಪರಿಹಾರ ಹುಡುಕುವ ಬದಲು, ಜೀವ ಹೋಗದಂತೆ ತಡೆಯುವುದು ನಮ್ಮ ಗುರಿ. ರೈತರು ಕೂಡಲೇ ಎಚ್ಚೆತ್ತುಕೊಂಡು ತಮ್ಮ ಜಮೀನಿನಲ್ಲಿರುವ ಸಾವಿನ ಕೂಪಗಳಿಗೆ ಬೇಲಿ ಹಾಕಬೇಕು,ಎಂದು ಡಾ. ಎಂ.ಆರ್. ರವಿ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಅಸುರಕ್ಷಿತ ಕೃಷಿ ಹೊಂಡಗಳ ಕುರಿತು ಗಂಭೀರವಾಗಿ ಪರಿಗಣಿಸಬೇಕು ಇಲ್ಲವಾದಲ್ಲಿ ಕ್ರಮ ಎದುರಿಸಲು ಸಜ್ಜಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಭಾನುವಾರ ಕೃಷಿ ಹೊಂಡದಲ್ಲಿ ಈಜಾಡಲು ತೆರಳಿದ್ದ ತಂದೆ ಹಾಗೂ ಇಬ್ಬರು ಮುದ್ದಿನ ಮಕ್ಕಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಈ ಘಟನೆ ನಕ್ಕನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಮಕ್ಕಳಿಗೆ ಈಜು ಕಲಿಸಲು ಹೋಗಿದ್ದಾಗ ಕಾಲು ಜಾರಿಬಿದ್ದು ದುರ್ಮರಣ ಕಾಲು ಜಾರಿ ಬಿದ್ದು ದುರಂತ ಸಂಭವಿಸಿದೆ. ಭಾನುವಾರ ರಜಾದಿನವಾಗಿದ್ದರಿಂದ ತಂದೆ ಶ್ರೀನಿವಾಸ್, ತಮ್ಮಿಬ್ಬರು ಮಕ್ಕಳಿಗೆ ಈಜು ಕಲಿಸಿಕೊಡಲು ಕರೆದುಕೊಂಡು ಹೋಗಿದ್ದರು. ಕಾಲು ಜಾರಿ ಬಿದ್ದು ಮೂವರು ನೀರಿನಲ್ಲಿ ಮುಳುಗಿ ಉಸಿರುಕಟ್ಟಿ ಮೃತಪಟ್ಟರು ಎಂದು ಮಾಸ್ತಿ ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande