
ಕೋಲಾರ, ೧೭ ಮೇ (ಹಿ.ಸ) :
ಆ್ಯಂಕರ್ : ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ನೂತನ ಸಿಂಡಿಕೇಟ್ ಸದಸ್ಯರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ನಗರದ ಎಕ್ಸೆಲೆಂಟ್ ಕಾಲೇಜಿನ ಸಂಸ್ಥಾಪಕರೂ ಹಾಗೂ ಕೋಲಾರ ತಾಲ್ಲೂಕಿನ ಹೂವಳ್ಳಿಯ ಎಂ.ವಿ.ರ0ಗಪ್ಪ ಬಿನ್ ವೆಂಕಟೇಶಪ್ಪ ಅವರನ್ನು ನೇಮಿಸಿ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.
ರಂಗಪ್ಪ ಅವರು ಈವರೆಗೂ ಕೋಲಾರದ ಬೆಂಗಳೂರು ಉತ್ತರ ವಿವಿಯ ಸಿಂಡಿಕೇಟ್ ಸದಸ್ಯರಾಗಿ, ಬೆಂಗಳೂರು ನಗರ ವಿವಿಯ ಸಿಂಡಿಕೇಟ್ ಸದಸ್ಯರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದು, ವಿವಿಗಳ ಅಭಿವೃದ್ದಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಉತ್ತಮ ಹೆಸರು ಗಳಿಸಿದ್ದರು.
ಕೋಲಾರ-ಟೇಕಲ್ ರಸ್ತೆಯ ಛತ್ರಕೋಡಿಹಳ್ಳಿ ಸಮೀಪ ತಮ್ಮದೇ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಪಿಯುಸಿ,ಪದವಿ ಸ್ನಾತಕೋತ್ತರ ಪದವಿ ಶಿಕ್ಷಣ ನೀಡುತ್ತಿರುವ ರಂಗಪ್ಪ, ಅನೇಕ ಬಡ ವಿದ್ಯಾರ್ಥಿಗಳಿಗೆ ಡೊನೇಷನ್ ರಹಿತ ಉಚಿತ ಶಿಕ್ಷಣ ನೀಡಿಯೂ ನೆರವಾಗಿದ್ದಾರೆ.
ಇದೀಗ ರಾಜ್ಯಪಾಲರು ಅವರನ್ನು ನೃಪತುಂಗ ವಿವಿಯ ಸಿಂಡಿಕೇಟ್ ಪ್ರಾಧಿಕಾರಕ್ಕೆ ನೇಮಿಸಿ ಅಧಿಸೂಚನೆ ಹೊರಡಿಸಿದ್ದು, ಮತ್ತೊಮ್ಮೆ ಅವರು ವಿವಿಯ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ರಂಗಪ್ಪ, ವಿಶ್ವವಿದ್ಯಾಲಯ ವ್ಯಾಪ್ತಿಯ ಯಾವುದೇ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು, ಅಲ್ಲಿನ ಅಭಿವೃದ್ದಿ ಪ್ರಕ್ರಿಯೆಗಳಿಗೆ ಎದುರಾಗುವ ತೊಂದರೆಗಳ ಕುರಿತು ಗಮನ ಹರಿಸಿ ವಿದ್ಯಾರ್ಥಿ ಸ್ನೇಹಿಯಾಗಿ ಮತ್ತು ವಿವಿಗಳ ಅಭಿವೃದ್ದಿ ಸ್ನೇಹಿಯಾಗಿ ಕೆಲಸ ಮಾಡುವುದಾಗಿ ತಿಳಿಸಿರುವ ಅವರು ತಮ್ಮ ನೇಮಕಕ್ಕೆ ಕಾರಣವಾದ ಸರ್ಕಾರ ಹಾಗೂ ರಾಜ್ಯಪಾಲರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್