
ಕೋಲಾರ, ಮೇ ೧೬ (ಹಿ.ಸ) :
ಆ್ಯಂಕರ್ : ಜಾನಪದ ಕಲೆಗಳ ಉಳಿಸುವುದು ನಮ್ಮ ಅಸ್ತಿತ್ವವನ್ನು ಉಳಿಸಿದಂತೆ, ನಮ್ಮ ಜಾನಪದ ಉಳಿವುದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿದಂತೆ ಎಂದು ಮಾಜಿ ಅಧ್ಯಕ್ಷರು ಕರ್ನಾಟಕ ಜಾನಪದ ಅಕಾಡೆಮಿ, ನಿವೃತ್ತ ನಿರ್ದೇಶಕರು ಆಕಾಶವಾಣಿ ಮತ್ತು ದೂರದರ್ಶನ ಹಾಗೂ ಖ್ಯಾತ ಜಾನಪದ ಗಾಯಕ ಡಾ.ಬಾನಂದೂರು ಕೆಂಪಯ್ಯ ಅಭಿಪ್ರಾಯಪಟ್ಟರು.
ಕೋಲಾರ ತಾಲ್ಲೂಕು ಅಮ್ಮೇರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಬೆಂಗಳೂರು ಹಾಗೂ ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ೨೦೨೫-೨೬ನೇ ಸಾಲಿನ ಜಿಲ್ಲಾ ಮಟ್ಟದ ಜಾನಪದ ಝೇಂಕಾರ ಹಾಗೂ ಮಕ್ಕಳ ಬೇಸಿಗೆ ಶಿಬರದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ಕಲೆಗಳು ಉಳಿಸಲು ಇಂತಹ ಶಿಬಿರಗಳು ಸಹಕಾರಿಯಾಗಿವೆ. ಜಾನಪದ ಕಲೆಗಳು ಮನುಷ್ಯತ್ವವನ್ನು ಕಲ್ಪಿಸುತ್ತದೆ. ಮೂಲ ಜಾನಪದ ಗೀತೆಗಳು ನಶಿಸಿ ಹೋಗಿವೆ. ಹಳೆಯ ಸಾಹಿತ್ಯವನ್ನು ಉಳಿಸುವ ಪ್ರಯತ್ನ ಮಾಡಬೇಕು. ಗಾಯನದ ಮೂಲಕ ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂಬ ಗೀತೆಯನ್ನು ಹಾಡುತ್ತಾ ಮುಂದುವರೆದು ಮಾತನಾಡಿ, ಜಾನಪದ ಎನ್ನುವುದು ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದು ನಮ್ಮ ಮಣ್ಣಿನ ಗುಣ ಮತ್ತು ಪೂರ್ವಜರ ಬದುಕಿನ ಅನುಭವಗಳ ಜೀವಂತ ಸಾಕ್ಷಿಯಾಗಿದೆ. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಹಾಗೂ ಮೊಬೈಲ್ ಸಂಸ್ಕೃತಿಗೆ ಮರುಳಾಗಿ ಯುವ ಪೀಳಿಗೆಯು ನಮ್ಮ ಮೂಲ ಸಾಂಸ್ಕೃತಿಕ ಬೇರುಗಳನ್ನು ಮರೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಬೇಸಿಗೆ ಶಿಬಿರಗಳು ಕೇವಲ ರಜೆಯ ಸಮಯ ಕಳೆಯುವ ತಾಣಗಳಾಗದೆ. ಮಕ್ಕಳಲ್ಲಿ ದೇಶಿ ಕಲೆಗಳ ಬಗ್ಗೆ ಅಭಿಮಾನ ಮೂಡಿಸುವ ಸುಂದರ ವೇದಿಕೆಗಳಾಗಬೇಕು. ಹಳ್ಳಿಯ ಸೊಗಡು, ಶ್ರಮಿಕರ ಹಾಡುಗಳು ಮತ್ತು ಸಾಂಪ್ರದಾಯಿಕ ಕಲೆಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾರ್ಮಿಕವಾಗಿ ನುಡಿದರು.
ಕೋಲಾರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಮಾತನಾಡಿ, ಇಲಾಖೆಯು ಇಂತಹ ಅರ್ಥಪೂರ್ಣ ಹಾಗೂ ಕಲಾತ್ಮಕ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುತ್ತಾ ಬಂದಿದೆ. ಗ್ರಾಮೀಣ ಭಾಗದಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ವೇದಿಕೆಯನ್ನು ಕಲ್ಪಿಸಿಕೊಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಮಕ್ಕಳು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಂಡು ಕೇವಲ ಪಠ್ಯ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಕಲೆ ಮತ್ತು ಸಾಹಿತ್ಯದ ಕಡೆಗೂ ಒಲವು ಬೆಳೆಸಿಕೊಳ್ಳಬೇಕು. ಪೋಷಕರು ಸಹ ತಮ್ಮ ಇಷ್ಟದಂತೆ ಮಕ್ಕಳನ್ನು ಕೇವಲ ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡದೆ, ಅವರಲ್ಲಿ ಅಡಗಿರುವ ಕಲಾತ್ಮಕ ಆಸಕ್ತಿಗಳಿಗೆ ನೀರೆರೆಯಬೇಕು ಎಂದು ಕರೆ ನೀಡಿದರು.
ಡಿ.ವೈ.ಎಸ್.ಪಿ. ಮಂಜುನಾಥ್.ಟಿ ಮಾತನಾಡಿ, ಜಾನಪದ ಸಾಹಿತ್ಯವು ಅಲಿಖಿತವಾಗಿದ್ದರೂ ತಲೆಮಾರುಗಳಿಂದ ಮೌಖಿಕ ಪರಂಪರೆಯ ಮೂಲಕ ಹರಿದು ಬಂದಿರುವ ಒಂದು ಅದ್ಭುತ ಜ್ಞಾನ ಭಂಡಾರವಾಗಿದೆ. ಹಳ್ಳಿಗರ ನಿತ್ಯ ಜೀವನದ ಶ್ರಮ, ಸೌಹಾರ್ದತೆ, ಪ್ರಕೃತಿ ಪ್ರೇಮ ಮತ್ತು ಮಾನವೀಯ ಮೌಲ್ಯಗಳು ಜಾನಪದ ಗೀತೆಗಳಲ್ಲಿ ಹಾಸುಹೊಕ್ಕಾಗಿವೆ. ಇಂದಿನ ಜಾಗತೀಕರಣದ ಅಬ್ಬರದಲ್ಲಿ ನಮ್ಮ ಗ್ರಾಮೀಣ ಕಲೆಗಳು ಮೂಲೆ ಗುಂಪಾಗುತ್ತಿದ್ದು, ಇವುಗಳ ಮರುಶೋಧನೆ ಮತ್ತು ಸಂರಕ್ಷಣೆ ಅತ್ಯಗತ್ಯವಾಗಿದೆ. ಜಾನಪದ ಝೇಂಕಾರದAತಹ ಕಾರ್ಯಕ್ರಮಗಳು ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಮೂಡಿಸಲು ನೆರವಾಗುತ್ತವೆ ಎಂದು ಸುದೀರ್ಘವಾಗಿ ವಿಶ್ಲೇಷಿಸಿದರು.
ದಲಿತ ಮುಖಂಡ ಚಂದ್ರಮೌಳಿ ಮಾತನಾಡಿ, ಜಾನಪದ ಕಲೆಗಳು ಮೂಲತಃ ಶ್ರಮಿಕ ವರ್ಗದ ಮತ್ತು ತಳಸಮುದಾಯಗಳ ಹೋರಾಟದ ಶಕ್ತಿಯಾಗಿವೆ. ತಮಟೆ, ಕೋಲಾಟ ಹಾಗೂ ತತ್ವಪದಗಳಂತಹ ಪ್ರತಿಯೊಂದು ಕಲಾಪ್ರಕಾರವೂ ಕೇವಲ ಕಲೆಯಷ್ಟೇ ಅಲ್ಲ, ಅವುಗಳ ಹಿಂದೆ ಸಾಮಾಜಿಕ ಸಮಾನತೆ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತಿದ ದೀರ್ಘ ಇತಿಹಾಸವಿದೆ. ಪ್ರಸ್ತುತ ದಿನಗಳಲ್ಲಿ ಇಂತಹ ಕಲೆಗಳಿಗೆ ಸೂಕ್ತ ಗೌರವ ಹಾಗೂ ಮನ್ನಣೆ ಸಿಗಬೇಕಾಗಿದೆ. ಬೇಸಿಗೆ ಶಿಬಿರದಲ್ಲಿ ಜಾತಿ, ಮತ ಎಂಬ ಭೇದಭಾವವಿಲ್ಲದೆ ಎಲ್ಲಾ ವರ್ಗದ ಮಕ್ಕಳು ಒಟ್ಟಾಗಿ ಜಾನಪದವನ್ನು ಕಲಿಯುತ್ತಿರುವುದು ಸಮಾಜದಲ್ಲಿ ಒಳ್ಳೆಯ ಬದಲಾವಣೆಯ ದಾರಿಯಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಸುಗಮ ಸಂಗೀತ : ಸೌದಾಮಿನಿ ಬಿ.ವಿ ಮತ್ತು ತಂಡ, ಜನಪದ ಗಾಯನ : ಹೆಚ್.ಶಾಂತಮ್ಮ ಮತ್ತು ತಂಡ, ಕೋಲಾಟ : ಗಣೇಶಪ್ಪ ಮತ್ತು ತಂಡ, ಸಮೂಹ ಗೀತೆ : ವೆಂಕಟಲಕ್ಷ್ಮಮ್ಮ ಮತ್ತು ತಂಡ, ತತ್ವಪದ ಗಾಯನ : ಶೈಲಜಾ .ಎಂ ಮತ್ತು ತಂಡ, ಜಾನಪದ ನೃತ್ಯ : ಅಂಕಿತ .ಎಲ್ ಮತ್ತು ತಂಡ, ಜನಪದ ಗಾಯನ : ನಾರಾಯಣಸ್ವಾಮಿ ಮತ್ತು ತಂಡ, ಜನಪದ ಗಾಯನ : ಮುನಿರತ್ನಮ್ಮ ಮತ್ತು ತಂಡ, ಗಂಗಟ್ಟ ನಡೆಸಿಕೊಟ್ಟರು. ಕಾರ್ಯಕ್ರಮದ ವಾದ್ಯಗೋಷ್ಠಿ ಆರ್.ವಿ. ರಮಣ : ತಬಲ, ವಕ್ಕಲೇರಿ ಆನಂದ್ : ಸೋಲೆಕ್ಸ್, ತಮಟೆ : ವೀರಸ್ವಾಮಿ ಸಹಕಾರ ನೀಡಿದರು. ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ವಿದ್ಯಾರ್ಥಿಗಳಿಂದ ಸಾಮಾಜಿಕ ನಾಟಕ ಮತ್ತು ನೃತ್ಯ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ದಲಿತ ಮುಖಂಡ ಟಿ. ವಿಜಯಕುಮಾರ್, ಉಪನ್ಯಾಸಕ ಡಾ. ಅರಿವು ಶಿವಪ್ಪ ಗಮನ ಮಹಿಳಾ ಸಮೂಹದ ಸಮನ್ವಯಾಧಿಕಾರಿ ಶಾಂತಮ್ಮ, ನವ ಕರ್ನಾಟಕ ಸ್ವಾಭಿಮಾನ ವೇದಿಕೆ ರಾಜ್ಯಾಧ್ಯಕ್ಷ ಹೆಚ್.ರಾಮಾಂಜಿನಪ್ಪ, ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಪ್ರಧಾನ ಕಾನೂನು ನೆರವು ಅಭೀಕ್ಷಕ ಎಸ್.ಸತೀಶ್, ಕವಿ ಡಾ.ಶರಣಪ್ಪ ಗಬ್ಬೂರ್, ಕವಿ ಡಿ. ನಾರಾಯಣಸ್ವಾಮಿ, ಚಿಗುರು ಸಂಸ್ಥೆಯ ಪ್ರಭಾವತಿ ಮುಂತಾದವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್