
ನವದೆಹಲಿ, 17 ಮೇ (ಹಿ.ಸ.) :
ಆ್ಯಂಕರ್ : ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಚಿವರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಭಾನುವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, 2024 ಮತ್ತು 2026ರಲ್ಲಿ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ ಸರ್ಕಾರ ಯಾವುದೇ ಪಾಠ ಕಲಿತಿಲ್ಲ ಎಂದು ಆರೋಪಿಸಿದರು.
ಪ್ರತಿ ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾದ ನಂತರ ತನಿಖಾ ಸಂಸ್ಥೆಗಳಿಗೆ ಪ್ರಕರಣ ಹಸ್ತಾಂತರಿಸಲಾಗುತ್ತದೆ, ಹೊಸ ಸಮಿತಿಗಳನ್ನು ರಚಿಸಲಾಗುತ್ತದೆ. ಆದರೆ ಪರೀಕ್ಷಾ ವ್ಯವಸ್ಥೆಯಲ್ಲಿ ಯಾವುದೇ ಮೂಲಭೂತ ಬದಲಾವಣೆ ಆಗುತ್ತಿಲ್ಲ ಎಂದು ಅವರು ಟೀಕಿಸಿದರು.
2024ರಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ ಪರೀಕ್ಷೆಯನ್ನು ರದ್ದುಗೊಳಿಸಲಿಲ್ಲ. ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಯಿತು. ಆದರೆ 2026ರಲ್ಲಿ ಮತ್ತೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಈ ಬಾರಿ ಪರೀಕ್ಷೆಯನ್ನೇ ರದ್ದುಗೊಳಿಸಬೇಕಾಯಿತು ಎಂದು ಅವರು ಹೇಳಿದರು.
ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ಪರೀಕ್ಷಾ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ. ಸರ್ಕಾರ ಈ ವಿಷಯದಲ್ಲಿ ಏಕೆ ಮೌನವಾಗಿದೆ? ನಿರಂತರವಾಗಿ ವಿಫಲವಾಗುತ್ತಿರುವ ಶಿಕ್ಷಣ ಸಚಿವರನ್ನು ಇನ್ನೂ ಹುದ್ದೆಯಲ್ಲಿ ಮುಂದುವರಿಸಿರುವುದು ಏಕೆ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.