
ಗದಗ, 17 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಪೆಟ್ರೋಲ್ ಅಭಾವ ತಲೆದೋರಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಗದಗ ನಗರದ ಮುಳಗುಂದ ನಾಕಾ ಬಳಿಯ ಎಚ್ಪಿ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಲಭ್ಯವಿಲ್ಲದ ಕಾರಣ ಗ್ರಾಹಕರು ನಿರಾಸೆಯಿಂದ ಹಿಂದಿರುಗುತ್ತಿರುವ ದೃಶ್ಯ ಕಂಡುಬಂದಿದೆ.
ನಗರದ ಪ್ರಮುಖ ಪೆಟ್ರೋಲ್ ಬಂಕ್ಗಳಲ್ಲಿ ಒಂದಾದ ಮುಳಗುಂದ ನಾಕಾ ಎಚ್ಪಿ ಪೆಟ್ರೋಲ್ ಬಂಕ್ನಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಪೆಟ್ರೋಲ್ ಸ್ಟಾಕ್ ಖಾಲಿಯಾಗಿರುವುದಾಗಿ ತಿಳಿದುಬಂದಿದೆ. ಇದರಿಂದ ಪೆಟ್ರೋಲ್ ತುಂಬಿಸಿಕೊಳ್ಳಲು ಬಂದಿದ್ದ ಬೈಕ್, ಕಾರು ಸೇರಿದಂತೆ ವಿವಿಧ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದರು.
ಪೆಟ್ರೋಲ್ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಹಲವರು ಬಂಕ್ಗೆ ಬಂದು ಮತ್ತೆ ಬೇರೆ ಬಂಕ್ಗಳತ್ತ ತೆರಳುವ ಪರಿಸ್ಥಿತಿ ನಿರ್ಮಾಣವಾಯಿತು. ಕೆಲ ವಾಹನ ಸವಾರರು ಸಾಕಷ್ಟು ಸಮಯ ಕಾಯ್ದು ಬಳಿಕವೂ ಇಂಧನ ಸಿಗದ ಕಾರಣ ಅಸಮಾಧಾನ ವ್ಯಕ್ತಪಡಿಸಿದರು.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಪರಿಣಾಮದಿಂದ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಸಾಧ್ಯತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಕೇಳಿಬರುತ್ತಿವೆ. ಆದರೆ ಸಂಬಂಧಪಟ್ಟ ಇಲಾಖೆಗಳು ಅಥವಾ ಸಂಸ್ಥೆಗಳಿಂದ ಈ ಕುರಿತು ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.
ಒಂದು ಕಡೆ ಇಂಧನ ದರ ಏರಿಕೆಯ ಬಿಸಿ ಜನರನ್ನು ಕಾಡುತ್ತಿದ್ದರೆ, ಮತ್ತೊಂದು ಕಡೆ ಸಮರ್ಪಕವಾಗಿ ಪೆಟ್ರೋಲ್ ಸಿಗದಿರುವುದು ವಾಹನ ಸವಾರರ ಆತಂಕ ಹೆಚ್ಚಿಸಿದೆ. ಉದ್ಯೋಗ, ವ್ಯಾಪಾರ ಹಾಗೂ ದೈನಂದಿನ ಕೆಲಸಗಳಿಗಾಗಿ ವಾಹನಗಳನ್ನೇ ಅವಲಂಬಿಸಿರುವ ಜನರು ಪೆಟ್ರೋಲ್ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಗದಗ ಜಿಲ್ಲೆಯಲ್ಲಿ ಪೆಟ್ರೋಲ್ ಪೂರೈಕೆಯನ್ನು ಸಮರ್ಪಕಗೊಳಿಸಿ, ಇಂಧನ ಅಭಾವ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತೈಲ ಕಂಪನಿಗಳು ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP