
ಮಾಲ್ಡಾ, 17 ಮೇ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಭಾರತ-ಬಾಂಗ್ಲಾದೇಶ ಗಡಿಭಾಗದಲ್ಲಿ ಮುಳ್ಳುತಂತಿ ಬೇಲಿ ನಿರ್ಮಾಣಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ಸಿಕ್ಕಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಗಡಿಯುದ್ದಕ್ಕೂ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಆಡಳಿತ ಕ್ರಮ ಕೈಗೊಂಡಿದ್ದು, ಶನಿವಾರದಿಂದಲೇ ಭೂ ಅಳತೆ ಮತ್ತು ದಾಖಲೆ ಪರಿಶೀಲನೆ ಕಾರ್ಯ ಆರಂಭವಾಗಿದೆ.
ಹಬೀಬ್ಪುರ ಬ್ಲಾಕಿನ ಭವಾನಿಪುರ ಹಾಗೂ ಆಗ್ರಾ ಹರಿಶ್ಚಂದ್ರಪುರ ಪ್ರದೇಶಗಳಲ್ಲಿ ಭೂ ಮತ್ತು ಭೂ ಸುಧಾರಣಾ ಇಲಾಖೆಯ ಅಧಿಕಾರಿಗಳು ಗಡಿ ಭಾಗದ ಜಮೀನುಗಳ ಅಳತೆ ಕಾರ್ಯ ಆರಂಭಿಸಿದರು. ಗಡಿ ಪ್ರದೇಶದ ರೈತರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯವೂ ಸಮಕಾಲದಲ್ಲಿ ನಡೆಯುತ್ತಿದೆ.
ಅಧಿಕಾರಿಗಳ ಪ್ರಕಾರ, ಮಾಲ್ಡಾ ಜಿಲ್ಲೆಯ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಭಾರತ-ಬಾಂಗ್ಲಾದೇಶ ಗಡಿಯ ಒಟ್ಟು ಉದ್ದ ಸುಮಾರು 172 ಕಿಲೋಮೀಟರ್ ಇದೆ. ಇದರಲ್ಲಿ ಸುಮಾರು 33 ಕಿಲೋಮೀಟರ್ ಪ್ರದೇಶ ಇನ್ನೂ ತೆರೆದ ಗಡಿಯಾಗಿದ್ದು, ಹಬೀಬ್ಪುರ ಬ್ಲಾಕ್ ವ್ಯಾಪ್ತಿಯಲ್ಲೇ 20ರಿಂದ 25 ಕಿಲೋಮೀಟರ್ ಭಾಗದಲ್ಲಿ ಮುಳ್ಳುತಂತಿ ಬೇಲಿ ಇಲ್ಲದಿರುವುದು ಭದ್ರತಾ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಸಂಪೂರ್ಣ ಗಡಿ ಭದ್ರತಾ ವ್ಯವಸ್ಥೆ ನಿರ್ಮಿಸಲು ಸುಮಾರು 260 ಎಕರೆ ಭೂಮಿ ಅಗತ್ಯವಿದೆ ಎಂದು ಆಡಳಿತ ಮೂಲಗಳು ತಿಳಿಸಿವೆ. ಇದುವರೆಗೆ 10 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಡಿ ಭದ್ರತಾ ಪಡೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ನಡುವೆ ತುರ್ತು ಸಭೆ ನಡೆದಿದ್ದು, ಸಭೆಯ ಬಳಿಕ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ.
ಗಡಿಯ ಸಮೀಪದ ರೈತರು ಈ ಕ್ರಮವನ್ನು ಸ್ವಾಗತಿಸಿದ್ದು, ತೆರೆದ ಗಡಿಯಿಂದಾಗಿ ಬೆಳೆ ಕಳವು ಮತ್ತು ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದವು ಎಂದು ಹೇಳಿದ್ದಾರೆ. ಮುಳ್ಳುತಂತಿ ಅಳವಡಿಸಿದ ಬಳಿಕ ಇಂತಹ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಹಬೀಬ್ಪುರ ಬ್ಲಾಕ್ ಭೂ ಮತ್ತು ಭೂ ಸುಧಾರಣಾ ಅಧಿಕಾರಿ ಸ್ವಪನ್ ತರಫ್ದಾರ್ ಮಾತನಾಡಿ, ರೈತರಿಂದ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಆರಂಭವಾಗಿದ್ದು, ನಿಗದಿತ ಅವಧಿಯೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಇದೇ ವಿಚಾರವಾಗಿ ಬಿಜೆಪಿ ನಾಯಕ ಜುಯಲ್ ಮುರ್ಮು ಪ್ರತಿಕ್ರಿಯಿಸಿ, ಹಿಂದಿನ ಅವಧಿಯಲ್ಲಿ ಗಡಿಯಲ್ಲಿ ಮುಳ್ಳುತಂತಿ ಅಳವಡಿಕೆಗೆ ರಾಜಕೀಯ ಕಾರಣಗಳಿಂದ ಅಡೆತಡೆ ಉಂಟಾಗಿದ್ದವು ಎಂದು ಆರೋಪಿಸಿದ್ದಾರೆ. ಈಗ ರಾಷ್ಟ್ರೀಯ ಭದ್ರತೆಯನ್ನು ಆದ್ಯತೆಯಾಗಿ ಪರಿಗಣಿಸಿ ಕಾರ್ಯಕ್ಕೆ ವೇಗ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.