
ಇಂಫಾಲ್, 17 ಮೇ (ಹಿ.ಸ.) :
ಆ್ಯಂಕರ್ : ಮಣಿಪುರದಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಇಬ್ಬರು ಮಾದಕವಸ್ತು ಕಳ್ಳಸಾಗಣೆದಾರರು ಹಾಗೂ ನಿಷೇಧಿತ ಉಗ್ರ ಸಂಘಟನೆಯ ಸಕ್ರಿಯ ಸದಸ್ಯನನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯ ವೇಳೆ ಹೆರಾಯಿನ್, ನಗದು ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರ ಪೊಲೀಸರ ಮಾಹಿತಿ ಪ್ರಕಾರ, ಕಾಕ್ಚಿಂಗ್ ಜಿಲ್ಲೆಯ ಹಿಯಾಂಗ್ಲಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ಪೋಲ್ ಸ್ಟಾರ್ ಕಾಲೇಜು ಸಮೀಪ ಭದ್ರತಾ ಪಡೆಗಳು ದಾಳಿ ನಡೆಸಿ, ಇಂಫಾಲ್ ಪೂರ್ವ ಜಿಲ್ಲೆಯ ಕೈರಾಂಗ್ ಮಾಯೈ ಲೈಕೈ ನಿವಾಸಿಗಳಾದ ಮೊಹಮ್ಮದ್ ಸಲೀಂ (31) ಮತ್ತು ಮೊಹಮ್ಮದ್ ನವಾಬ್ (32) ಅವರನ್ನು ಬಂಧಿಸಿವೆ.
ತಪಾಸಣೆಯ ವೇಳೆ ಸುಮಾರು 147 ಗ್ರಾಂ ತೂಕದ ಹೆರಾಯಿನ್ ಕಂದು ಸಕ್ಕರೆಯನ್ನು 13 ಸೋಪ್ ಪೆಟ್ಟಿಗೆಗಳಲ್ಲಿ ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ ನಾಲ್ಕು ಚಕ್ರದ ವಾಹನ ಹಾಗೂ ₹52 ಸಾವಿರ ನಗದನ್ನೂ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರ ಸಂಘಟನೆಯಾದ ಕೆಸಿಪಿ (ಆಂಪ) ಸಂಘಟನೆಯ ಸಕ್ರಿಯ ಸದಸ್ಯ ರೆಕ್ಸ್ ಥೌಡಮ್ ಅಲಿಯಾಸ್ ಮಚಟೋಂಬಿ (23)ನನ್ನು ಭದ್ರತಾ ಪಡೆಗಳು ಬಂಧಿಸಿವೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಸಿಂಗ್ಜಮೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಉಗ್ರನು ಇಂಫಾಲ್ ಪೂರ್ವ ಜಿಲ್ಲೆಯ ಪ್ಯಾಲೇಸ್ ಕಾಂಪೌಂಡ್ ಹೈಜಿಂಗಾಂಗ್ ರಸ್ತೆಯ ನಿವಾಸಿಯಾಗಿದ್ದು, ಪ್ರಸ್ತುತ ಕಾಕ್ವಾ ನವೋರೆಮ್ ಲೀಕೈ ಪ್ರದೇಶದಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡೂ ಪ್ರಕರಣಗಳಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದ್ದು, ಮಾದಕವಸ್ತು ಜಾಲ ಹಾಗೂ ಉಗ್ರ ಸಂಘಟನೆಗಳ ಸಂಪರ್ಕಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.