
ಬಳ್ಳಾರಿ, 17 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಜಿಲ್ಲೆಯ ಭೂ-ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ‘ಭೂ-ಒಡೆತನ ಯೋಜನೆಯಡಿ' ಜಮೀನು ಖರೀದಿಸಲು ಉದ್ದೇಶಿಸಲಾಗಿದೆ.
ಈ ನಿಟ್ಟಿನಲ್ಲಿ ವಿವಿಧ ತಾಲೂಕುಗಳ ಭೂ-ಮಾಲೀಕರು ತಮ್ಮ ಜಮೀನನ್ನು ನಿಗಮಕ್ಕೆ ಮಾರಾಟ ಮಾಡಲು ಮುಂದೆ ಬಂದು ಸಮ್ಮತಿ ಪತ್ರ ಸಲ್ಲಿಸಿದ್ದಾರೆ. ಜಮೀನುಗಳ ಖರೀದಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯ ಸಿರಿಗೇರಿ, ಕರೂರು, ಮುದ್ದಟನೂರು, ನಡವಿ, ಬಂಡ್ರಾಳು, ಕುರುವಳ್ಳಿ, ಕೆಂಚಗೇರಿ, ಬೆಳಗಲ್ಲು, ಟಿ. ರಾಂಪುರ ಹಾಗೂ ಅಗಸನೂರು ಗ್ರಾಮಗಳ ಒಟ್ಟು 166.55 ಎಕರೆ ಜಮೀನು ಮಾರಾಟಕ್ಕೆ ಲಭ್ಯವಿದೆ. ಆಕ್ಷೇಪಣೆ ಸಲ್ಲಿಸಲು ಜೂನ್ 1 ರ ವರೆಗೆ ಕಾಲಾವಕಾಶ ನೀಡಲಾಗಿದೆ.
ಸಾರ್ವಜನಿಕರು ಈ ಜಮೀನುಗಳಿಗೆ ಸಂಬಂಧಿಸಿದಂತೆ ಯಾವುದೇ ಲಿಖಿತ ಆಕ್ಷೇಪಣೆಗಳಿದ್ದಲ್ಲಿ, ಕಚೇರಿ ಅವಧಿಯೊಳಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದಾಗಿದೆ.
ಆಕ್ಷೇಪಣೆ ಇರುವ ಸಾರ್ವಜನಿಕರು ಬಳ್ಳಾರಿಯ ಕೋಟೆಯಲ್ಲಿರುವ, ಸಂತೋಷಿ ಮಾತಾ ಮಂದಿರದ ಎದುರುಗಡೆ ಹಾಗೂ ಪಿ.ಡಬ್ಲೂ್ಯ.ಡಿ. ಕಚೇರಿ ಹತ್ತಿರವಿರುವ “ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ” ಇವರ ಕಚೇರಿಗೆ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ನಿಗದಿತ ಸಮಯದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂ.08392 - 267932 ಗೆ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್