ಹಿಂದೂಸ್ತಾನ್ ಸಮಾಚಾರ ಫಲಶ್ರುತಿ ; ವರದಿ ಬೆನ್ನಲ್ಲೇ ಎಚ್ಚೆತ್ತ ಆಡಳಿತ ಯಂತ್ರ
ಉಂಟಾಗಿದೆ
ಫೋಟೋ


ಗದಗ, 17 ಮೇ (ಹಿ.ಸ.) :

ಆ್ಯಂಕರ್ : ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಉಲ್ಬಣಗೊಂಡಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಹಿಂದೂಸ್ತಾನ್ ಸಮಾಚಾರ ಪ್ರಸಾರ ಮಾಡಿದ ವರದಿ ಬೆನ್ನಲ್ಲೇ ಆಡಳಿತ ಯಂತ್ರ ಎಚ್ಚೆತ್ತುಕೊಂಡಿದ್ದು, ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹೆಚ್ಚಾಗಿ ವಾಸಿಸುವ ತಿಮ್ಮಾಪುರ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಜಲಕ್ಷಾಮ ತಲೆದೋರಿತ್ತು. ಗ್ರಾಮದ ಪ್ರಮುಖ ಕುಡಿಯುವ ನೀರಿನ ಕೆರೆ ಸಂಪೂರ್ಣ ಬತ್ತಿ ಹೋಗಿದ್ದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿತ್ತು. ಒಂದು ಬಿಂದಿಗೆ ನೀರಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಉಂಟಾಗಿದ್ದು, ಜಾನುವಾರುಗಳಿಗೆ ಸಹ ಕುಡಿಯುವ ನೀರು ದೊರೆಯದೇ ರೈತರು ಸಂಕಷ್ಟ ಅನುಭವಿಸುತ್ತಿದ್ದರು.

ಗ್ರಾಮದ ಈ ದುಸ್ಥಿತಿಯನ್ನು ಹಿಂದೂಸ್ತಾನ್ ಸಮಾಚಾರ ತನ್ನ ನೆಲಮಟ್ಟದ ವಿಸ್ತೃತ ವರದಿಯ ಮೂಲಕ ಬೆಳಕಿಗೆ ತಂದಿತ್ತು. ಬತ್ತಿ ಹೋದ ಕೆರೆ, ನೀರಿಗಾಗಿ ಗೋಳಾಡುತ್ತಿದ್ದ ಜನರು, ದೂರದ ಪ್ರದೇಶಗಳಿಂದ ಟ್ಯಾಂಕರ್ ಮೂಲಕ ನೀರು ತಂದು ಜೀವನ ಸಾಗಿಸುತ್ತಿದ್ದ ಕುಟುಂಬಗಳ ಪರಿಸ್ಥಿತಿಯನ್ನು ವರದಿಯಲ್ಲಿ ವಿವರವಾಗಿ ಬಿಂಬಿಸಲಾಗಿತ್ತು.

ನಮ್ಮ ವರದಿ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ವಿ. ವೆಂಕಟೇಶ ಅವರು ತಿಮ್ಮಾಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ಗ್ರಾಮದ ಕುಡಿಯುವ ನೀರಿನ ಕೆರೆಯನ್ನು ವೀಕ್ಷಿಸಿದ ಅವರು, ನೀರಿನ ಲಭ್ಯತೆ, ಪೈಪ್ಲೈನ್ ವ್ಯವಸ್ಥೆ ಹಾಗೂ ಪರ್ಯಾಯ ನೀರು ಪೂರೈಕೆ ಕುರಿತಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮದ ನೀರಿನ ಸಮಸ್ಯೆ ಕುರಿತು ಸಮಗ್ರ ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿ, ತುರ್ತು ಕ್ರಮಗಳ ಮೂಲಕ ಗ್ರಾಮಕ್ಕೆ ಸಮರ್ಪಕ ನೀರು ಪೂರೈಕೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಿಮ್ಮಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ತಕ್ಷಣ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುವುದು. ಜೊತೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಜರುಗಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಒಂದು ವಾರದೊಳಗೆ ಸಮಸ್ಯೆ ಪರಿಹಾರದ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ ವರದಿ ಬಳಿಕ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿರುವುದು ಗ್ರಾಮಸ್ಥರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಸಮಸ್ಯೆ ಪರಿಹಾರಕ್ಕೆ ಸರ್ಕಾರ ಹಾಗೂ ಆಡಳಿತ ಯಂತ್ರ ಸ್ಪಂದಿಸಿರುವುದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದು, ತಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದ ಹಿಂದೂಸ್ತಾನ್ ಸಮಾಚಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ತಿಮ್ಮಾಪುರ ಗ್ರಾಮದ ಜಲಕ್ಷಾಮದ ಕುರಿತು ಪ್ರಸಾರವಾದ ಈ ಇಂಪ್ಯಾಕ್ಟ್ ಸ್ಟೋರಿ ಆಡಳಿತ ಯಂತ್ರವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande