ಐದು ರಾಜ್ಯಗಳಲ್ಲಿ 1.44 ಕೋಟಿಗೂ ಹೆಚ್ಚು ಕುಟುಂಬಗಳಿಂದ ಸ್ವಯಂ ಗಣತಿ
ನವದೆಹಲಿ, 17 ಮೇ (ಹಿ.ಸ.) : ಆ್ಯಂಕರ್ : ದೇಶವ್ಯಾಪಿ ನಡೆಯಲಿರುವ 2027ರ ಜನಗಣತಿಯ ಮೊದಲ ಹಂತದಡಿ ಮನೆಗಳ ಪಟ್ಟಿ ಹಾಗೂ ಮನೆಗಳ ಎಣಿಕೆ ಕಾರ್ಯ ಐದು ಪ್ರಮುಖ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭವಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಡಿಜಿಟಲ್ ಜನಗಣತಿ ವ್ಯವಸ್ಥ
ಐದು ರಾಜ್ಯಗಳಲ್ಲಿ 1.44 ಕೋಟಿಗೂ ಹೆಚ್ಚು ಕುಟುಂಬಗಳಿಂದ ಸ್ವಯಂ ಗಣತಿ


ನವದೆಹಲಿ, 17 ಮೇ (ಹಿ.ಸ.) :

ಆ್ಯಂಕರ್ : ದೇಶವ್ಯಾಪಿ ನಡೆಯಲಿರುವ 2027ರ ಜನಗಣತಿಯ ಮೊದಲ ಹಂತದಡಿ ಮನೆಗಳ ಪಟ್ಟಿ ಹಾಗೂ ಮನೆಗಳ ಎಣಿಕೆ ಕಾರ್ಯ ಐದು ಪ್ರಮುಖ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭವಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಡಿಜಿಟಲ್ ಜನಗಣತಿ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದು ತಿಳಿಸಿದೆ.

ಪ್ರಸ್ತುತ ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿ, ರಾಜಸ್ಥಾನ, ಮೇಘಾಲಯ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಮನೆ-ಮನೆ ಗಣನೆ ಕಾರ್ಯ ಆರಂಭಗೊಂಡಿದೆ. ಇದರ ಜೊತೆಗೆ, ಡಿಜಿಟಲ್ ಜನಗಣತಿಯ ಭಾಗವಾಗಿ ಪರಿಚಯಿಸಲಾದ ಸ್ವಯಂ-ಎಣಿಕೆ ವ್ಯವಸ್ಥೆಯಡಿ ದೇಶದ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗೆ 1.44 ಕೋಟಿಗೂ ಅಧಿಕ ಕುಟುಂಬಗಳು ತಮ್ಮ ವಿವರಗಳನ್ನು ಆನ್ಲೈನ್ ಮೂಲಕ ಸ್ವಯಂ ದಾಖಲಿಸಿಕೊಂಡಿವೆ.

ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್ಗಢ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್, ತೆಲಂಗಾಣ, ಉತ್ತರಾಖಂಡ, ಅರುಣಾಚಲ ಪ್ರದೇಶ, ಚಂಡೀಗಢ ಹಾಗೂ ದಾದ್ರಾ ಮತ್ತು ನಗರ ಹವೇಲಿ-ದಮನ್ ಮತ್ತು ದಿಯು ಪ್ರದೇಶಗಳಲ್ಲಿ ಈಗಾಗಲೇ ಮನೆ-ಮನೆ ಪಟ್ಟಿ ಕಾರ್ಯ ನಡೆಯುತ್ತಿದೆ.

ಗುಜರಾತ್, ಜಮ್ಮು-ಕಾಶ್ಮೀರ, ಲಡಾಖ್ ಮತ್ತು ಪುದುಚೇರಿಯಲ್ಲಿ ಶನಿವಾರದಿಂದ ಸ್ವಯಂ-ಎಣಿಕೆ ಸೌಲಭ್ಯ ಆರಂಭಗೊಂಡಿದ್ದು, ಅಲ್ಲಿನ ನಾಗರಿಕರು ಮೇ 31ರವರೆಗೆ ಅಧಿಕೃತ ಪೋರ್ಟಲ್ ಮೂಲಕ ತಮ್ಮ ಮಾಹಿತಿಯನ್ನು ದಾಖಲಿಸಬಹುದು. ನಂತರ ಜೂನ್ 1ರಿಂದ 30ರವರೆಗೆ ಕ್ಷೇತ್ರಮಟ್ಟದ ಮನೆ ಗಣನೆ ಕಾರ್ಯ ನಡೆಯಲಿದೆ.

ಉತ್ತರ ಪ್ರದೇಶದಲ್ಲಿ ಮೇ 21ರವರೆಗೆ ಸ್ವಯಂ-ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಬಳಿಕ ಮೇ 22ರಿಂದ ಜೂನ್ 20ರವರೆಗೆ ಮನೆ-ಮನೆ ಗಣನೆ ಕೈಗೊಳ್ಳಲಾಗುತ್ತದೆ.

ಈ ಮೊದಲು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಮಿಜೋರಾಂ, ಒಡಿಶಾ, ಸಿಕ್ಕಿಂ ಹಾಗೂ ದೆಹಲಿಯ ಎನ್ಡಿಎಂಸಿ ಮತ್ತು ಕ್ಯಾಂಟೋನ್ಮೆಂಟ್ ಬೋರ್ಡ್ ಪ್ರದೇಶಗಳಲ್ಲಿ ಮನೆಗಳ ಪಟ್ಟಿ ಮತ್ತು ಗಣನೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಜನಗಣತಿ ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ನಡೆಸಲಾಗುತ್ತಿದ್ದು, ಎಣಿಕೆದಾರರು ವಿಶೇಷ ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ಈ ಹಂತದಲ್ಲಿ ಕುಟುಂಬಗಳಿಗೆ ಒಟ್ಟು 33 ಪ್ರಶ್ನೆಗಳಿರುವ ಪ್ರಶ್ನಾವಳಿಯನ್ನು ನೀಡಲಾಗುತ್ತದೆ. ಇದರಲ್ಲಿ ವಸತಿ ಸ್ಥಿತಿ, ಕುಟುಂಬದ ಸದಸ್ಯರ ವಿವರಗಳು, ಮನೆಗಳಲ್ಲಿ ಲಭ್ಯವಿರುವ ಮೂಲಭೂತ ಸೌಲಭ್ಯಗಳು ಹಾಗೂ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಸರ್ಕಾರದ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಈ ದತ್ತಾಂಶ ಅತ್ಯಂತ ಮಹತ್ವದ್ದಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸ್ವಯಂ-ಎಣಿಕೆ ಪೂರ್ಣಗೊಳಿಸಿದ ಕುಟುಂಬಗಳಿಗೆ ವಿಶೇಷ ‘ಸ್ವಯಂ-ಎಣಿಕೆ ಐಡಿ’ ನೀಡಲಾಗಿದ್ದು, ಎಣಿಕೆದಾರರು ಮನೆಗೆ ಭೇಟಿ ನೀಡುವ ವೇಳೆ ಅದನ್ನು ತೋರಿಸುವಂತೆ ನಾಗರಿಕರಿಗೆ ಸೂಚಿಸಲಾಗಿದೆ.

ಯಾವುದೇ ಕಾರಣದಿಂದ ಸ್ವಯಂ-ಎಣಿಕೆ ಮಾಡದ ಕುಟುಂಬಗಳು ಆತಂಕಪಡುವ ಅಗತ್ಯವಿಲ್ಲ. ಎಣಿಕೆದಾರರು ಮನೆ-ಮನೆಗೆ ತೆರಳಿ ಅಗತ್ಯ ಮಾಹಿತಿಯನ್ನು ದಾಖಲಿಸಲಿದ್ದಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

1948ರ ಜನಗಣತಿ ಕಾಯ್ದೆಯಡಿ ನಾಗರಿಕರು ನೀಡುವ ಎಲ್ಲಾ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ. ಈ ಮಾಹಿತಿಯನ್ನು ಕೇವಲ ಸಂಖ್ಯಾಶಾಸ್ತ್ರೀಯ ಉದ್ದೇಶಗಳು ಹಾಗೂ ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳ ರೂಪಿಕರಣಕ್ಕೆ ಮಾತ್ರ ಬಳಸಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande