ಗ್ರೇಟ್ ನಿಕೋಬಾರ್ ಯೋಜನೆ ಮರುಪರಿಶೀಲನೆಗೆ ಕಾಂಗ್ರೆಸ್ ಆಗ್ರಹ
ನವದೆಹಲಿ, 17 ಮೇ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕೇಂದ್ರ ಸರ್ಕಾರದ ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು, ಪರಿಸರ ಹಾನಿ ಕಡಿಮೆ ಮಾಡುವ ಪರ್ಯಾಯ ರಕ್ಷಣಾ ಮೂಲಸೌಕರ್ಯ ಪ್ರಸ್ತಾವನೆಗಳನ್
ಜೈರಾಮ್ ರಮೇಶ್


ನವದೆಹಲಿ, 17 ಮೇ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕೇಂದ್ರ ಸರ್ಕಾರದ ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು, ಪರಿಸರ ಹಾನಿ ಕಡಿಮೆ ಮಾಡುವ ಪರ್ಯಾಯ ರಕ್ಷಣಾ ಮೂಲಸೌಕರ್ಯ ಪ್ರಸ್ತಾವನೆಗಳನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಗ್ರೇಟ್ ನಿಕೋಬಾರ್ ಯೋಜನೆಯನ್ನು ಸಮರ್ಥಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಅದರ ಪ್ರಸ್ತುತ ರೂಪವು ದೊಡ್ಡ ಪ್ರಮಾಣದ ಪರಿಸರ ಹಾನಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಜೈರಾಮ್ ರಮೇಶ್ ತಮ್ಮ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಗೆ ಸಂಬಂಧಿಸಿದ ಪರಿಸರ ಅನುಮತಿ, ಅರಣ್ಯ ಹಕ್ಕುಗಳ ಕಾಯ್ದೆ ಹಾಗೂ ಸ್ಥಳೀಯ ಸಮುದಾಯಗಳ ಹಕ್ಕುಗಳ ಕುರಿತು ಈ ಹಿಂದೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೂ ಪತ್ರ ಬರೆದಿರುವುದಾಗಿ ಅವರು ಉಲ್ಲೇಖಿಸಿದ್ದಾರೆ.

ದೇಶದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಅಗತ್ಯದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದಿದ್ದರೂ, ಪರಿಸರಕ್ಕೆ ಭಾರೀ ಹಾನಿ ಉಂಟುಮಾಡುವ ಯೋಜನೆಯನ್ನು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಮುಂದುವರಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪತ್ರದಲ್ಲಿ ಗ್ರೇಟ್ ನಿಕೋಬಾರ್ನ ಕ್ಯಾಂಪ್ಬೆಲ್ ಬೇ ಪ್ರದೇಶದಲ್ಲಿರುವ ಐಎನ್ಎಸ್ ಬಾಜ್ ವಾಯುನೆಲೆಯ ವಿಸ್ತರಣೆಯ ವಿಷಯವನ್ನೂ ಪ್ರಸ್ತಾಪಿಸಲಾಗಿದೆ. ಅಸ್ತಿತ್ವದಲ್ಲಿರುವ ರನ್ವೇಯನ್ನು ಮೂರು ಪಟ್ಟು ವಿಸ್ತರಿಸುವ ಹಾಗೂ ನೌಕಾ ಜೆಟ್ಟಿ ನಿರ್ಮಿಸುವ ಯೋಜನೆಗಳು ಕಳೆದ ಐದು ವರ್ಷಗಳಿಂದ ಅನುಮೋದನೆಗಾಗಿ ಕಾಯುತ್ತಿವೆ ಎಂದು ಅವರು ತಿಳಿಸಿದ್ದಾರೆ. ಇಂತಹ ಯೋಜನೆಗಳ ಪರಿಸರ ಪರಿಣಾಮವು ಪ್ರಸ್ತುತ ಗ್ರೇಟ್ ನಿಕೋಬಾರ್ ಯೋಜನೆಗಿಂತ ಬಹಳ ಕಡಿಮೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ವ್ಯಾಪ್ತಿಯಲ್ಲಿರುವ ಐಎನ್ಎಸ್ ಕಾರ್ಡೀಪ್, ಐಎನ್ಎಸ್ ಕೋಹಸ್ಸಾ, ಐಎನ್ಎಸ್ ಉತ್ಕ್ರೋಶ್, ಐಎನ್ಎಸ್ ಜರಾವಾ ಹಾಗೂ ಕಾರ್ ನಿಕೋಬಾರ್ ವಾಯುಪಡೆ ನಿಲ್ದಾಣಗಳಂತಹ ಈಗಿರುವ ರಕ್ಷಣಾ ಮೂಲಸೌಕರ್ಯಗಳನ್ನು ಕಡಿಮೆ ಪರಿಸರ ಹಾನಿಯೊಂದಿಗೆ ವಿಸ್ತರಿಸಬಹುದು ಎಂದು ಜೈರಾಮ್ ರಮೇಶ್ ಸಲಹೆ ನೀಡಿದ್ದಾರೆ.

ಗ್ರೇಟ್ ನಿಕೋಬಾರ್ ಯೋಜನೆಯಡಿಯಲ್ಲಿ ಪ್ರಸ್ತಾಪಿಸಲಾದ ಟ್ರಾನ್ಸ್ಶಿಪ್ಮೆಂಟ್ ಬಂದರು, ವಿಮಾನ ನಿಲ್ದಾಣ, ವಿದ್ಯುತ್ ಘಟಕ ಹಾಗೂ ಹೊಸ ಪಟ್ಟಣ ನಿರ್ಮಾಣ ಯೋಜನೆಗಳು ದೇಶದ ಸೈನಿಕ ಸಾಮರ್ಥ್ಯ ಹೆಚ್ಚಿಸುವುದಕ್ಕಿಂತ ವಾಣಿಜ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯೋಜನೆಯ ಪ್ರಸ್ತುತ ರೂಪವು “ಪರಿಸರ ವಿಕೋಪದ ಸೂತ್ರ”ವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿರುವ ಜೈರಾಮ್ ರಮೇಶ್, ಕೆಲವು ಹಿರಿಯ ನೌಕಾಪಡೆಯ ಅಧಿಕಾರಿಗಳು ಸೂಚಿಸಿರುವ ಪರ್ಯಾಯ ಪ್ರಸ್ತಾವನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ರಕ್ಷಣಾ ಸಚಿವರನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಗ್ರೇಟ್ ನಿಕೋಬಾರ್ ಯೋಜನೆಗೆ ಪರಿಸರವಾದಿಗಳು, ಸಾಮಾಜಿಕ ಸಂಘಟನೆಗಳು ಹಾಗೂ ಪ್ರತಿ ಪಕ್ಷಗಳಿಂದ ನಿರಂತರ ವಿರೋಧ ವ್ಯಕ್ತವಾಗುತ್ತಿದ್ದು, ಪರಿಸರ ಸಮತೋಲನ ಮತ್ತು ಜೈವ ವೈವಿಧ್ಯತೆಗೆ ಧಕ್ಕೆ ಉಂಟಾಗುವ ಬಗ್ಗೆ ಆತಂಕಗಳು ವ್ಯಕ್ತವಾಗುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande