
ಗದಗ, 17 ಮೇ (ಹಿ.ಸ.) :
ಆ್ಯಂಕರ್ : ಮುಂಗಾರು ಹಂಗಾಮು ಸಮೀಪಿಸುತ್ತಿದ್ದಂತೆ ಗದಗ ಜಿಲ್ಲೆಯಲ್ಲಿ ಜೋಡೆತ್ತುಗಳ ಖರೀದಿ ಭರಾಟೆ ಜೋರಾಗಿದ್ದು, ರೈತರು ಮತ್ತೆ ಸಂಪ್ರದಾಯಿಕ ಕೃಷಿಯತ್ತ ಮುಖ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ, ಕೆಲವೆಡೆ ಇಂಧನ ಲಭ್ಯತೆಯ ಸಮಸ್ಯೆ ಮತ್ತು ಯಾಂತ್ರಿಕ ಕೃಷಿಯ ದುಬಾರಿ ವೆಚ್ಚದ ನಡುವೆಯೇ ರೈತರು ಜೋಡಿ ಎತ್ತುಗಳ ಮೊರೆ ಹೋಗಿದ್ದಾರೆ.
ಗದಗ ನಗರದ ಎಪಿಎಂಸಿ ಆವರಣದಲ್ಲಿನ ಜಾನುವಾರು ಸಂತೆಯಲ್ಲಿ ಈ ಬಾರಿ ಜೋಡೆತ್ತುಗಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಮುಂಗಾರು ಮಳೆ ಆರಂಭಕ್ಕೂ ಮುನ್ನ ಜಮೀನು ಹದ ಮಾಡುವುದು, ಉಳುಮೆ, ಬಿತ್ತನೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ನಡೆಸುತ್ತಿರುವ ರೈತರು, ಉತ್ತಮ ತಳಿಯ ಜೋಡಿ ಎತ್ತುಗಳನ್ನು ಖರೀದಿಸಲು ಸಂತೆಯತ್ತ ಧಾವಿಸಿದ್ದಾರೆ.
ಹಾವೇರಿ, ಹುಬ್ಬಳ್ಳಿ, ಧಾರವಾಡ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವ್ಯಾಪಾರಿಗಳು ಹಾಗೂ ರೈತರು ತಮ್ಮ ಉತ್ತಮ ತಳಿಯ ಎತ್ತುಗಳನ್ನು ಸಂತೆಗೆ ಕರೆತಂದಿದ್ದರು. ಎತ್ತುಗಳ ಮೈಕಟ್ಟು, ಶಕ್ತಿ, ಕೆಲಸ ಮಾಡುವ ಸಾಮರ್ಥ್ಯ, ವಯಸ್ಸು ಹಾಗೂ ತಳಿಯನ್ನು ಪರಿಶೀಲಿಸಿ ರೈತರು ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ ಜೋಡೆತ್ತುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ಬೆಲೆಯಲ್ಲಿಯೂ ಗಣನೀಯ ಏರಿಕೆ ದಾಖಲಾಗಿದೆ.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ಮತ್ತು ತೈಲ ಮಾರುಕಟ್ಟೆಯ ಅಸ್ಥಿರತೆ ಪರಿಣಾಮ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಏರಿಕೆ ಉಂಟಾಗಿದೆ ಎನ್ನಲಾಗುತ್ತಿದೆ. ಇದರ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೂ ಬೀಳತೊಡಗಿದ್ದು, ಟ್ರ್ಯಾಕ್ಟರ್ ಸೇರಿದಂತೆ ಯಾಂತ್ರಿಕ ಕೃಷಿಗೆ ಅವಲಂಬಿತರಾಗಿರುವ ರೈತರಿಗೆ ಇಂಧನ ವೆಚ್ಚ ಹೆಚ್ಚಳ ತಲೆನೋವಾಗಿ ಪರಿಣಮಿಸಿದೆ.
ಕೆಲ ರೈತರು ಡಿಸೇಲ್ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಟ್ರ್ಯಾಕ್ಟರ್ ಮೂಲಕ ಹೊಲ ಉಳುಮೆ ಮಾಡಲು ಹೆಚ್ಚಿನ ವೆಚ್ಚವಾಗುತ್ತಿರುವುದರಿಂದ ಸಂಪ್ರದಾಯಿಕ ಕೃಷಿಯೇ ಹೆಚ್ಚು ಅನುಕೂಲಕರ ಎಂಬ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
ಬಳಗಾನೂರ ಗ್ರಾಮದ ರೈತ ಗಣಪತಿ ಮಾತನಾಡಿ, “ಕೃಷಿ ಕೆಲಸಗಳು ಆರಂಭವಾಗುವ ಸಮಯದಲ್ಲಿ ಡಿಸೇಲ್ ವೆಚ್ಚ ಹೆಚ್ಚಾಗಿದೆ. ಟ್ರ್ಯಾಕ್ಟರ್ ಮೂಲಕ ಕೃಷಿ ಮಾಡಲು ಹೆಚ್ಚು ಹಣ ಬೇಕಾಗುತ್ತಿದೆ. ಅದಕ್ಕಿಂತ ಜೋಡೆತ್ತುಗಳನ್ನು ಇಟ್ಟುಕೊಂಡು ಕೃಷಿ ಮಾಡುವುದು ಅನುಕೂಲಕರವಾಗಿದೆ. ಆದ್ದರಿಂದಲೇ ರೈತರು ಮತ್ತೆ ಎತ್ತುಗಳತ್ತ ಮುಖ ಮಾಡುತ್ತಿದ್ದಾರೆ” ಎಂದು ಹೇಳಿದರು.
ಇನ್ನೊಬ್ಬ ರೈತ ಈರಪ್ಪ ಮಾತನಾಡಿ, “ಮುಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಟ್ರ್ಯಾಕ್ಟರ್ಗೆ ಡಿಸೇಲ್ ಸಮಸ್ಯೆ ಮತ್ತು ದುಬಾರಿ ವೆಚ್ಚ ಇರುವುದರಿಂದ ಎತ್ತುಗಳಿಂದ ಉಳುಮೆ ಮಾಡುವುದು ಉತ್ತಮ. ಜೋಡೆತ್ತುಗಳಿಂದ ಕೃಷಿ ಕಾರ್ಯಗಳು ಸುಗಮವಾಗಿ ನಡೆಯುತ್ತವೆ” ಎಂದು ಅಭಿಪ್ರಾಯಪಟ್ಟರು.
ಜಾನುವಾರು ಸಂತೆಯಲ್ಲಿ ಉತ್ತಮ ಜೋಡಿ ಎತ್ತುಗಳಿಗೆ ಒಂದು ಲಕ್ಷದಿಂದ ಎರಡು ಲಕ್ಷ ರೂಪಾಯಿವರೆಗೆ ಬೆಲೆ ನಿಗದಿಯಾಗಿದ್ದು, ಕೆಲ ವಿಶೇಷ ತಳಿಯ ಎತ್ತುಗಳಿಗೆ ಇನ್ನೂ ಹೆಚ್ಚಿನ ಬೆಲೆ ಕೇಳಲಾಗುತ್ತಿದೆ. ದುಬಾರಿ ಬೆಲೆ ಇದ್ದರೂ ರೈತರು ಖರೀದಿಗೆ ಹಿಂದೇಟು ಹಾಕದಿರುವುದು ಗಮನ ಸೆಳೆಯುತ್ತಿದೆ.
ಒಂದೆಡೆ ಆಧುನಿಕ ಯಾಂತ್ರಿಕ ಕೃಷಿ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಹೆಚ್ಚುತ್ತಿರುವ ಇಂಧನ ವೆಚ್ಚ ಮತ್ತು ಲಭ್ಯತೆಯ ಸಮಸ್ಯೆ ಹಿನ್ನೆಲೆಯಲ್ಲಿ ರೈತರು ಮತ್ತೆ ಸಂಪ್ರದಾಯಿಕ ಕೃಷಿಯತ್ತ ಮರಳುತ್ತಿರುವುದು ಕೃಷಿ ಕ್ಷೇತ್ರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಜೋಡೆತ್ತುಗಳ ಖರೀದಿ ಹೆಚ್ಚಳವು ಕೃಷಿ ಪದ್ಧತಿಯಲ್ಲಿ ಬದಲಾಗುತ್ತಿರುವ ಮನೋಭಾವದ ಪ್ರತೀಕವಾಗಿ ಕಾಣುತ್ತಿದೆ.
ಒಟ್ಟಾರೆ, ಮುಂಗಾರು ಆರಂಭಕ್ಕೂ ಮುನ್ನ ಗದಗ ಜಿಲ್ಲೆಯಲ್ಲಿ ಜೋಡೆತ್ತುಗಳ ಖರೀದಿ ಭರಾಟೆ ಜೋರಾಗಿದ್ದು, ಡಿಸೇಲ್ ಬೆಲೆ ಏರಿಕೆ ಹಾಗೂ ಯಾಂತ್ರಿಕ ಕೃಷಿಯ ಹೆಚ್ಚುತ್ತಿರುವ ವೆಚ್ಚದ ನಡುವೆ ಸಂಪ್ರದಾಯಿಕ ಕೃಷಿಯತ್ತ ರೈತರ ಒಲವು ಮತ್ತೆ ಹೆಚ್ಚುತ್ತಿರುವುದು ಸ್ಪಷ್ಟವಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / lalita MP