
ನವದೆಹಲಿ, 17 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ರೈಲು ಸಂಪರ್ಕಕ್ಕೆ ಮತ್ತಷ್ಟು ಬಲ ತುಂಬುವ ಮಹತ್ವದ ಹೆಜ್ಜೆಯಾಗಿ ಬೆಂಗಳೂರು-ಮುಂಬೈ ಎಕ್ಸ್‌ಪ್ರೆಸ್ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿದರು. ಇದೇ ವೇಳೆ ಬೆಂಗಳೂರು ಮತ್ತು ಮುಂಬೈ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು.
ದಕ್ಷಿಣ ಮತ್ತು ಉತ್ತರ ಕರ್ನಾಟಕದ ಹಲವು ದಶಕಗಳ ರೈಲು ಬೇಡಿಕೆಗಳು ಇದೀಗ ಒಂದೊಂದಾಗಿ ಈಡೇರುತ್ತಿವೆ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ ರೈಲ್ವೆಗೆ ನೀಡಲಾಗುತ್ತಿರುವ ಹೆಚ್ಚುವರಿ ಅನುದಾನದಿಂದ ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ಸಿಕ್ಕಿದೆ ಎಂದರು.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕರ್ನಾಟಕದ 61 ರೈಲು ನಿಲ್ದಾಣಗಳನ್ನು ₹2,160 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುತ್ತಿದೆ. ಈಗಾಗಲೇ 9 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದೆ. ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣವನ್ನು ₹485 ಕೋಟಿ ವೆಚ್ಚದಲ್ಲಿ ಹಾಗೂ ಯಶವಂತಪುರ ನಿಲ್ದಾಣವನ್ನು ₹367 ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
2014ರಿಂದ ರಾಜ್ಯದಲ್ಲಿ ಸುಮಾರು 1,750 ಕಿಲೋಮೀಟರ್ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ. ಹಾಸನ-ಮಂಗಳೂರು ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರ ಪರೀಕ್ಷೆಗಳು ನಡೆಯುತ್ತಿವೆ ಎಂದು ಹೇಳಿದರು.
ಬೆಂಗಳೂರು ಉಪನಗರ ರೈಲು ಯೋಜನೆಯ ಎಲ್ಲಾ ನಾಲ್ಕು ಕಾರಿಡಾರ್ಗಳ ಕಾಮಗಾರಿ ಪ್ರಗತಿಯಲ್ಲಿದೆ. ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಹಾಗೂ ಹೀಲಲಿಗೆ-ರಾಜನುಕುಂಟೆ ಕಾರಿಡಾರ್ಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಿಲ್ದಾಣ ನಿರ್ಮಾಣ ಕಾಮಗಾರಿಗಳು ಆರಂಭವಾಗಿವೆ. ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ ಮಾರ್ಗಕ್ಕೆ ರಾಜ್ಯ ಸರ್ಕಾರ ಹಾಗೂ ರೈಲ್ವೆಯ ಜಂಟಿ ಅನುಮೋದನೆ ದೊರೆತಿದ್ದು, ಭೂ ತಾಂತ್ರಿಕ ಸಮೀಕ್ಷೆ ಪೂರ್ಣಗೊಂಡಿದೆ. ಕೆಂಗೇರಿ-ವೈಟ್ಫೀಲ್ಡ್ ಮಾರ್ಗಕ್ಕೂ ಇತ್ತೀಚೆಗೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಈಗಾಗಲೇ 12 ಜೋಡಿ ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಹೊಸ ಪ್ರಯೋಗಾತ್ಮಕ ಸೇವೆಗಳು ನಡೆಯುತ್ತಿದ್ದು, ಕರಾವಳಿ ಭಾಗದ ಸಂಪರ್ಕ ಇನ್ನಷ್ಟು ಸುಧಾರಣೆಯಾಗಲಿದೆ ಎಂದರು.
ಬೆಂಗಳೂರು-ಹೈದರಾಬಾದ್ ಹಾಗೂ ಬೆಂಗಳೂರು-ಚೆನ್ನೈ ನಡುವೆ ಬುಲೆಟ್ ರೈಲು ಕಾರಿಡಾರ್ ಯೋಜನೆಗಳಿಗೂ ಅನುಮೋದನೆ ದೊರೆತಿದೆ ಎಂದು ಸಚಿವರು ಹೇಳಿದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಬೆಂಗಳೂರು-ಮುಂಬೈ ಹೊಸ ರೈಲು ಸೇವೆಯಿಂದ ದೇಶದ ಅತ್ಯಂತ ಜನನಿಬಿಡ ಮಾರ್ಗದಲ್ಲಿ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಸಿಗಲಿದೆ ಎಂದು ಹೇಳಿದರು.
ತಾನಿಸಂದ್ರದಲ್ಲಿ ₹270 ಕೋಟಿ ವೆಚ್ಚದಲ್ಲಿ ವಂದೇ ಭಾರತ್ ಸ್ಲೀಪರ್ ನಿರ್ವಹಣಾ ಕೇಂದ್ರ ಸ್ಥಾಪಿಸಲಾಗುವುದು. ಜೊತೆಗೆ ಎಸ್ಎಂವಿಟಿ ಬೆಂಗಳೂರಿನಲ್ಲಿ ₹52.73 ಕೋಟಿ ವೆಚ್ಚದಲ್ಲಿ ಚೇರ್ ಕಾರ್ ನಿರ್ವಹಣಾ ಸೌಲಭ್ಯ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಬೈಯಪ್ಪನಹಳ್ಳಿ-ಹೊಸೂರು ದ್ವಿಪಥ ಯೋಜನೆ, ಬೆಟ್ಟಹಲಸುರು-ರಾಜನುಕುಂಟೆ ಮಾರ್ಗ ಅಭಿವೃದ್ಧಿ ಹಾಗೂ ಬೆಂಗಳೂರು ಭಾಗದಲ್ಲಿ ನಾಲ್ಕು ಪಟ್ಟು ರೈಲು ಮಾರ್ಗ ವಿಸ್ತರಣೆ ಕಾಮಗಾರಿಗಳ ಮೂಲಕ ರೈಲು ಸಂಚಾರ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ಇದರೊಂದಿಗೆ ವಿವಿಧ ರೈಲು ವಿಭಾಗಗಳಲ್ಲಿ ₹6,396 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿ ಕರ್ನಾಟಕಕ್ಕೆ ₹7,748 ಕೋಟಿ ಮೊತ್ತದ ದಾಖಲೆಯ ರೈಲ್ವೆ ಬಜೆಟ್ ಹಂಚಿಕೆ ದೊರೆತಿದೆ. 2014ರಿಂದ ರಾಜ್ಯದಲ್ಲಿ 3,840 ಕಿಲೋಮೀಟರ್ ರೈಲು ಮಾರ್ಗ ಅಭಿವೃದ್ಧಿಪಡಿಸಲಾಗಿದ್ದು, 3,742 ಕಿಲೋಮೀಟರ್ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ ಎಂದು ಹೇಳಿದರು.
ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲಾ ಲೆವೆಲ್ ಕ್ರಾಸಿಂಗ್ಗಳನ್ನು ತೆರವುಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ ಎಂದು ಸಚಿವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.