
ಗದಗ, 16 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಇಪ್ಕೋ ,ಗದಗ ಇವರ ಸಂಯುಕ್ತಾಶ್ರಯದಲ್ಲಿ ಕೃಷಿ ಪರಿಕರಗಳ ಗುಣಮಟ್ಟ ನಿಯಂತ್ರಣ ನಿಯಮಗಳು ಹಾಗೂ ಮಾರ್ಗಸೂಚಿಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಗದಗ ಇಲ್ಲಿ ಆಯೋಜಿಸಲಾಗಿತ್ತು.
ಕೃಷಿ ಮತ್ತು ಸಂಬಂಧಿತ ಕಾನೂನುಗಳ ಕೇಂದ್ರದ ನಿರ್ದೇಶಕರಾದ ವೆಂಕಟರವಣಪ್ಪ ಅವರು ಕೃಷಿ ಪರಿಕರಗಳ ಗುಣಮಟ್ಟ ಕಾಪಾಡುವ ಮಹತ್ವ ಪರವಾನಿಗೆ ನಿಯಮಗಳು, ದಾಖಲೆ ನಿರ್ವಹಣೆ , ಕೃಷಿ ಪರಿಕರಗಳ ಸಂಗ್ರಹ ವಿಧಾನಗಳು, ಮಾರಾಟ ನಿಯಮಗಳು ಹಾಗೂ ಸರ್ಕಾರದ ವಿವಿಧ ಕಾಯ್ದೆ ಮತ್ತು ನಿಯಮಾವಳಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಬೀಜ ಅಧಿನಿಯಮ, ರಸಗೊಬ್ಬರ ನಿಯಂತ್ರಣ ಆದೇಶ ( ಎಫ್ ಸಿ ಓ) , ಕೀಟನಾಶಕ ಅಧಿನಿಯಮ ಹಾಗೂ ಇತರ ಸಂಬಂಧಿತ ನಿಯಮಗಳ ಕುರಿತು ಮಾಹಿತಿ ನೀಡಿದರು.
ಕೃಷಿ ಪರಿಕರಗಳ ಮಾದರಿ ಸಂಗ್ರಹ, ಲೇಬಲ್ ನಿಯಮಗಳು, ಬಿಲ್ ನೀಡುವ ಕಡ್ಡಾಯತೆ ಹಾಗೂ ರೈತರಿಗೆ ಸರಿಯಾದ ಮಾರ್ಗದರ್ಶನ ನೀಡುವ ಬಗ್ಗೆ ವಿತರಕರಿಗೆ ಸಲಹೆ ನೀಡಿದರು.
ಇಪ್ಕೋ ಕ್ಷೇತ್ರ ಅಧಿಕಾರಿ ರಾಘವೇಂದ್ರ ಎನ್ ಇವರು ಇಪ್ಕೋ ಉತ್ಪನ್ನಗಳ ಕುರಿತು ಶ್ರವಣ ದೃಶ್ಯ ಮಾಧ್ಯಮದ ಮೂಲಕ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಸಹಾಯಕ ನಿರ್ದೇಶಕರು ತರಬೇತಿ ಡಾ.ಅಬ್ದುಲ್ ಅಜೀಜ್ ಮುಲ್ಲಾ ಭಾಗವಹಿಸಿದ್ದರು.
ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ಚೇತನಾ ಪಾಟೀಲ ಅವರು ಮಾತನಾಡಿ ಜಿಲ್ಲೆಯ ವಿವಿಧ ತಾಲೂಕುಗಳ ಕೃಷಿ ಪರಿಕರ ವಿತರಕರು ಹಾಗೂ ಕೃಷಿ ಇಲಾಖೆಯು ರೈತರಿಗೆ ಗುಣಮಟ್ಟದ ಪರಿಕರಗಳನ್ನು ಪೂರೈಸಲು ಜೊತೆಗೂಡಿ ಕೆಲಸ ಮಾಡೋಣ ಎಂದರು.
ಇದೇ ಸಂದರ್ಭದಲ್ಲಿ ಯೂರಿಯಾ ವಿತರಣೆಗಾಗಿ ನವೀಕರಿಸಿದ ಕೆ.-ಕಿಸಾನ್ ತಂತ್ರಾಂಶದ ಬಳಕೆ ಕುರಿತು ಕೃಷಿ ಅಧಿಕಾರಿ ಶ್ರೀಮತಿ ಚಿತ್ರಾ ತರಬೇತಿ ನೀಡಿದರು ಹಾಗೂ ಮಾರಾಟಗಾರರಿಂದ ತಂತ್ರಾಂಶದ ಬಳಕೆ ಕುರಿತು ಬಂದ ಪ್ರಶ್ನೆಗಳಿಗೆ ಪರಿಹಾರೋಪಾಯಗಳನ್ನು ನೀಡಲಾಯಿತು. ಜಿಲ್ಲೆಯ ವಿವಿಧ ತಾಲೂಕುಗಳ 300 ಕೃಷಿ ಪರಿಕರ ವಿತರಕರು , ಕೃಷಿ ಅಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಶ್ರೀಮತಿ ಸ್ಪೂರ್ತಿ ಜಿ.ಎಸ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಂಡರಗಿ ಸಹಾಯಕ ಕೃಷಿ ನಿರ್ದೇಶಕರು ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP