ಮಳೆಗಾಗಿ ಬೊಂಬೆಗಳ ಮದುವೆ ; ವರ್ಚಗಲ್ಲ ಗ್ರಾಮದಲ್ಲಿ ವಿಶಿಷ್ಟ ಆಚರಣೆ
ಬಾಗಲಕೋಟೆ, 16 ಮೇ (ಹಿ.ಸ.) : ಆಂಕರ್ : ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿರುವ ಹಿನ್ನೆಲೆ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ಮುಧೋಳ ತಾಲೂಕಿನ ವರ್ಚಗಲ್ಲ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಬೊಂಬೆಗಳ ಮದುವೆ ನೆರವೇರಿಸಿ ವರುಣ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದ
ಪೂಜೆ


ಬಾಗಲಕೋಟೆ, 16 ಮೇ (ಹಿ.ಸ.) :

ಆಂಕರ್ : ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿರುವ ಹಿನ್ನೆಲೆ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ಮುಧೋಳ ತಾಲೂಕಿನ ವರ್ಚಗಲ್ಲ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಬೊಂಬೆಗಳ ಮದುವೆ ನೆರವೇರಿಸಿ ವರುಣ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗ್ರಾಮದ ಮಹಿಳೆಯರು, ಹಿರಿಯರು ಹಾಗೂ ಯುವಕರು ಒಂದಾಗಿ ಈ ವಿಶಿಷ್ಟ ಆಚರಣೆಯಲ್ಲಿ ಭಾಗವಹಿಸಿದ್ದು, ಗ್ರಾಮದ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಬೊಂಬೆಗಳನ್ನು ಕರೆತಂದು ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಲಾಯಿತು.

ಬೊಂಬೆಗಳಿಗೆ ಹೊಸ ಬಟ್ಟೆಗಳನ್ನು ತೊಡಿಸಿ, ಅಲಂಕಾರ ಮಾಡಿ, ಹೂಮಾಲೆ ಹಾಕಿ ಮದುವೆಯ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಹೊಸ ಬಟ್ಟೆ ತೊಟ್ಟು ಸಂಭ್ರಮದಿಂದ ಪಾಲ್ಗೊಂಡು ಮಂಗಳಗೀತೆ ಹಾಡಿ ಸಾಂಪ್ರದಾಯಿಕ ಸಂಸ್ಕೃತಿಯನ್ನು ಮೆರೆದರು. ಮದುವೆ ಸಮಾರಂಭದ ವೇಳೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳು ಸಹ ಉತ್ಸಾಹದಿಂದ ಭಾಗವಹಿಸಿದ್ದರು.

ಗ್ರಾಮದ ಹಿರಿಯರು ಮಾತನಾಡಿ, “ಹಿಂದಿನಿಂದಲೂ ಮಳೆ ಕೊರತೆಯಾದಾಗ ಗ್ರಾಮದಲ್ಲಿ ಇಂತಹ ಆಚರಣೆಗಳನ್ನು ನಡೆಸುವ ಸಂಪ್ರದಾಯ ಇದೆ. ಪ್ರಕೃತಿ ಕೃಪೆಯಿಂದ ಉತ್ತಮ ಮಳೆ ಸುರಿದು ರೈತರಿಗೆ ಸಮೃದ್ಧ ಬೆಳೆ ಸಿಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ತಿಳಿಸಿದರು.

ಕಾರ್ಯಕ್ರಮದ ಬಳಿಕ ಗ್ರಾಮಸ್ಥರು ವರುಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ರೈತರ ಬದುಕು ಹಸನಾಗಲಿ, ಬೆಳೆಗಳು ಚೆನ್ನಾಗಿ ಬೆಳೆಯಲಿ ಹಾಗೂ ಗ್ರಾಮದಲ್ಲಿ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಗ್ರಾಮದ ಹಲವಾರು ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಪ್ರದಾಯ ಮತ್ತು ಭಕ್ತಿಭಾವವನ್ನು ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande