ವಿಜಯಪುರದಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಭರ್ಜರಿ ಸಿದ್ಧತೆ
ಸಿದ್ಧತೆ
Aat


ವಿಜಯಪುರ, 16 ಮೇ (ಹಿ.ಸ.) :

ಆಂಕರ್ : ರಾಜ್ಯದ ಕ್ರೀಡಾಭಿಮಾನಿಗಳ ಗಮನ ಸೆಳೆಯುವ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ವಿಜಯಪುರ ನಗರ ಸಂಪೂರ್ಣ ಸಜ್ಜಾಗಿದೆ. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಮೇ 17ರಿಂದ 23ರವರೆಗೆ ನಗರದ BLDE ಒಳಾಂಗಣ ಕ್ರೀಡಾಂಗಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ.

ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 15ರಿಂದ 17 ವರ್ಷದೊಳಗಿನ ಪ್ರತಿಭಾವಂತ ಕ್ರೀಡಾಪಟುಗಳು ಭಾಗವಹಿಸಲಿದ್ದು, ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಮಹತ್ವದ ವೇದಿಕೆ ದೊರೆಯಲಿದೆ. ಬಾಲಕರ ಹಾಗೂ ಬಾಲಕಿಯರ ವಿಭಾಗಗಳಲ್ಲಿ ಹಲವು ರೋಚಕ ಪಂದ್ಯಗಳು ನಡೆಯಲಿದ್ದು, ಕ್ರೀಡಾಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಪಂದ್ಯಾವಳಿಯ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರೊಂದಿಗೆ ಅಧಿಕಾರಿಗಳು ಮತ್ತು ಆಯೋಜಕರು BLDE ಆವರಣದಲ್ಲಿರುವ ಬ್ಯಾಡ್ಮಿಂಟನ್ ಕ್ರೀಡಾಂಗಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ಕ್ರೀಡಾಂಗಣಗಳ ಸ್ವಚ್ಛತೆ, ಬೆಳಕಿನ ವ್ಯವಸ್ಥೆ, ಆಟಗಾರರ ವಸತಿ, ಕುಡಿಯುವ ನೀರು, ಪ್ರೇಕ್ಷಕರ ಆಸನ ವ್ಯವಸ್ಥೆ ಹಾಗೂ ಭದ್ರತಾ ಕ್ರಮಗಳ ಕುರಿತು ಸ್ಥಳದಲ್ಲಿಯೇ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕರು, “ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಯುವ ಪ್ರತಿಭೆಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಭವಿಷ್ಯದ ರಾಷ್ಟ್ರಮಟ್ಟದ ಆಟಗಾರರನ್ನು ರೂಪಿಸುವ ದಿಸೆಯಲ್ಲಿ ಈ ಪಂದ್ಯಾವಳಿ ನೆರವಾಗಲಿದೆ” ಎಂದು ತಿಳಿಸಿದರು.

ವಿಜಯಪುರ ನಗರದಲ್ಲಿ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ಆಯೋಜನೆಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ಜಿಲ್ಲೆಯ ಕ್ರೀಡಾ ವಲಯದಲ್ಲೂ ಈ ಕ್ರೀಡಾಕೂಟ ಹೊಸ ಚೈತನ್ಯ ಮೂಡಿಸಿದ್ದು, ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande