

ಬಳ್ಳಾರಿ, 16 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕೆಎಸ್ಆರ್ಟಿಸಿ ಹಾಗೂ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಯು ಮೇ 19ರ ಮಧ್ಯರಾತ್ರಿಯಿಂದ ಅನಿರ್ಧಿಷ್ಟಾವಾಧಿ ಮುಷ್ಕರ ಕೈಗೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಠನೆಗಳ ಜಂಟಿ ಕ್ರಿಯಾ ಸಮಿತಿಯ ಬಳ್ಳಾರಿ ವಿಭಾಗದ ಅಧ್ಯಕ್ಷರಾಗಿರುವ ಹೆಚ್.ಎ. ಆದಿಮೂರ್ತಿ ಅವರು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಸರ್ಕಾರ ನಮ್ಮ ವಿರುದ್ಧ ಎಸ್ಮಾ ಜಾರಿ ಮಾಡಿದರೂ ನಾವ್ಯಾರೂ ಭಯ ಬೀಳುವುದಿಲ್ಲ. ಹೆದರುವ ಪ್ರಶ್ನೆಯೇ ಇಲ್ಲ. ನಮ್ಮ ಹಕ್ಕುಗಳು, ಸೌಲಭ್ಯಗಳಿಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಸಾರ್ವಜನಿಕರೂ ಸಹಕಾರ ನೀಡಬೇಕು. ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಸಾರಿಗೆ ನೌಕರರಿಗೆ 38 ತಿಂಗಳ ಬಾಕಿ ವೇತನವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಕರ್ನಾಟಕ ಸರ್ಕಾರ ಶೇ. 25ರಷ್ಟು ವೇತನ ಹೆಚ್ಚಳಕ್ಕೆ ಬದಲಾಗಿ ಶೇ. 12.5 ಶೇಕಡಾ ವೇತನ ಹೆಚ್ಚಳ ಘೋಷಣೆ ಮಾಡಿ, ಕಣ್ಣೊರೆಸುವ ತಂತ್ರ ಅನುಸರಿಸಿದೆ. ಈ ಹೋರಾಟವು ವೇತನಕ್ಕಾಗಿ ಮಾತ್ರವಲ್ಲ, ನಮ್ಮ ಬದುಕಿನ ಭದ್ರತೆ ಮತ್ತು ಗೌರವಕ್ಕಾಗಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್