



ಬಳ್ಳಾರಿ, 16 ಮೇ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಸೈಕ್ಲಿಸ್ಟ್ ಅಂಡ್ ರನ್ನರ್ಸ್ ಫೌಂಡೇಶನ್ (ಬಿಸಿಎಆರ್) ಐದನೇ ಆವೃತ್ತಿಯ ಬಳ್ಳಾರಿಯ ಹೆಮ್ಮೆಯ ಸ್ಟೀಲ್ ಸಿಟಿ ರನ್ ಅನ್ನು ಆಗಸ್ಟ್ 2ರ ಭಾನುವಾರ ಬಳ್ಳಾರಿಯಲ್ಲಿ ಆಯೋಜಿಸಿದೆ.
ಬಳ್ಳಾರಿ ಸೈಕ್ಲಿಸ್ಟ್ ಅಂಡ್ ರನ್ನರ್ಸ್ ಫೌಂಡೇಶನ್ ಅಧ್ಯಕ್ಷರಾದ ಡಾ. ಎಂ. ತಿಪ್ಪಾರೆಡ್ಡಿ, ಉಪಾಧ್ಯಕ್ಷರಾದ ನರೇಂದ್ರ ಗಾಂಧಿ, ಕಾರ್ಯದರ್ಶಿ ವಿಕಾಸ್ ಜೈನ್, ಜಂಟಿ ಕಾರ್ಯದರ್ಶಿಗಳಾದ ಪ್ರಶಾಂತ್ ಶಾರಡ, ಖಜಾಂಚಿ ವಿನೋದ್ ಜೈನ್, ಮಾಜಿ ಅಧ್ಯಕ್ಷರಾದ ಡಾ. ಬಿ.ಕೆ. ಸುಂದರ್, ಡಾ. ಎಸ್.ಎಂ. ಸೋಮನಾಥ್, ಡಾ. ಎಸ್. ರವಿಶಂಕರ್ ಇನ್ನಿತರರು ಈ ಕುರಿತು ಸುದ್ದಿಗಾರರಿಗೆ ಶನಿವಾರ ಮಾಹಿತಿ ನೀಡಿದರು.
ಈ ವರ್ಷ ತರಬೇತಿ ಪಡೆದ / ವೃತ್ತಿ ನಿರತ ಓಟಗಾರರಿಗಾಗಿ ಹೊಸದಾಗಿ 16 ಕೀ.ಮೀ. (10 ಮೈಲು) ಓಟವನ್ನು ಪ್ರಥಮ ಬಾರಿಗೆ ಪರಿಚಯಿಸಲಾಗುತ್ತಿದೆ. ಓಡುವ ಪ್ರವೃತ್ತಿಯಲ್ಲಿ ತೊಡಗಿಕೊಂಡವರಿಗಾಗಿ - ಕುಟುಂಬ ಸಮೇತ ಪಾಲ್ಗೊಳ್ಳುವವರಿಗಾಗಿ ಹಾಗೂ ಫಿಟ್ನೆಸ್ ಆಸಕ್ತರನ್ನು ಉತ್ತೇಜಿಸುವ ಸಲುವಾಗಿ 10 ಕಿಮೀ ಮತ್ತು 5 ಕಿಮೀ ಟೈಮ್ಡ್ ರನ್ಗಳ ಜೊತೆಗೆ 3 ಕಿಮೀ ಮಜಾ (ಫನ್) ರನ್ ಅನ್ನು ಆಯೋಜಿಸಲಾಗಿದೆ ಎಂದರು.
2022ರ ಮೊದಲ ಆವೃತ್ತಿಯಲ್ಲಿ ಸುಮಾರು 1,100ಕ್ಕೂ ಹೆಚ್ಚು ಓಟಗಾರರು, 2ನೇ ಆವೃತ್ತಿಯಲ್ಲಿ 2,500ಕ್ಕೂ ಹೆಚ್ಚು, 3ನೇ ಹಾಗೂ 4ನೇ ಆವೃತ್ತಿಗಳಲ್ಲಿ 4,200ಕ್ಕೂ ಹೆಚ್ಚು ಓಟಗಾರರು ಪಾಲ್ಗೊಂಡಿದ್ದರು. 5ನೇ ಆವೃತ್ತಿಯಲ್ಲಿ 5 ಸಾವಿರ ಓಟಗಾರರ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಸ್ಪರ್ಧಾಳುಗಳಿಗೆ ಈವೆಂಟ್ ಟೀ-ಶರ್ಟ್, ಬಿಬ್ ಸಂಖ್ಯೆ, ಕುರುಕಲು ತಿಂಡಿ, ಉಪಾಹಾರ, ಕುಡಿಯುವ ನೀರು, ಮಾರ್ಗ ಸಹಾಯ ಮತ್ತು ಉಚಿತ ಛಾಯಾಚಿತ್ರಗಳನ್ನು ನೀಡಲಾಗುತ್ತದೆ. 16 ಕೀ ಮೀ 10 ಕೀ ಮೀ ಮತ್ತು 5 ಕೀಮೀ ವಿಭಾಗದಲ್ಲಿ ಭಾಗವಹಿಸುವವರಿಗೆ ಹೆಚ್ಚುವರಿಯಾಗಿ ಚಿಪ್ ಟೈಮಿಂಗ್, ಫಿನಿಷರ್ ಮೆಡಲ್ ಮತ್ತು ಇ-ಪ್ರಮಾಣಪತ್ರ ನೀಡಲಾಗುತ್ತದೆ ಎಂದರು.
ಸ್ಟೀಲ್ ಸಿಟಿ ರನ್ 2026ಗಾಗಿ ನೋಂದಣಿಯಲ್ಲಿ ಪಾಲ್ಗೊಳ್ಳಲು ಆಸಕ್ತರು ವೆಬ್ಸೈಟ್ ವಿಳಾಸ - www.steelcityrun.com ದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಪೋಸ್ಟರ್ ಅನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್