
ಚಂಡೀಗಡ, 16 ಮೇ (ಹಿ.ಸ.) :
ಆ್ಯಂಕರ್ : ಪಂಜಾಬ್ ಹೋಶಿಯಾರ್ಪುರ ಜಿಲ್ಲೆಯ ಚಕ್ ಸಮಾನಾ ಗ್ರಾಮದಲ್ಲಿ ಬೋರ್ವೆಲ್ಗೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕನನ್ನು ಸುಮಾರು ಒಂಬತ್ತು ಗಂಟೆಗಳ ನಿರಂತರ ರಕ್ಷಣಾ ಕಾರ್ಯಾಚರಣೆಯ ಬಳಿಕ ಶನಿವಾರ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.
ಗುರುಕರಣ್ ಸಿಂಗ್ ಎಂಬ ಬಾಲಕ ಶುಕ್ರವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ತನ್ನ ಮನೆಯ ಸಮೀಪದಲ್ಲಿದ್ದ ತೆರೆದ ಬೋರ್ವೆಲ್ಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಬಾಲಕ ಸುಮಾರು 30 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪಂಜಾಬ್ ಪೊಲೀಸರು, ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾಮಸ್ಥರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬೋರ್ವೆಲ್ ಪಕ್ಕದಲ್ಲಿ 30 ಅಡಿಗೂ ಹೆಚ್ಚು ಆಳದ ಗುಂಡಿಯನ್ನು ಅಗೆಯಲಾಗಿದ್ದು, ನಂತರ ಕಿರಿದಾದ ಮಾರ್ಗದ ಮೂಲಕ ಬಾಲಕನಿದ್ದ ಸ್ಥಳವನ್ನು ತಲುಪಿ ರಕ್ಷಣೆ ಕಾರ್ಯ ಕೈಗೊಳ್ಳಲಾಯಿತು.
ರಾತ್ರಿ ಪೂರ್ತಿ ನಡೆದ ಕಾರ್ಯಾಚರಣೆಯ ಬಳಿಕ ಶನಿವಾರ ಗುರುಕರಣ್ ಸಿಂಗ್ ಅವರನ್ನು ಸುರಕ್ಷಿತವಾಗಿ ಹೊರತೆಗೆದು ತಕ್ಷಣ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.
ಜಿಲ್ಲಾಧಿಕಾರಿ ಆಶಿಕಾ ಜೈನ್ ಹಾಗೂ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಮಲಿಕ್ ಆರಂಭದಿಂದಲೇ ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ನೇತೃತ್ವ ವಹಿಸಿದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲಾ ತಂಡಗಳ ಧೈರ್ಯ ಮತ್ತು ಸಮನ್ವಯವನ್ನು ಅವರು ಶ್ಲಾಘಿಸಿದರು.
ರಕ್ಷಣಾ ಕಾರ್ಯವನ್ನು ವೇಗಗೊಳಿಸಲು ಅಗತ್ಯ ಯಂತ್ರೋಪಕರಣಗಳನ್ನು ಸ್ಥಳಕ್ಕೆ ತರಲಾಗಿತ್ತು. ಜೊತೆಗೆ ಬೋರ್ವೆಲ್ ಒಳಗೆ ಕ್ಯಾಮೆರಾ ಮತ್ತು ಆಮ್ಲಜನಕ ಪೈಪ್ ಇಳಿಸಿ ಬಾಲಕನ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು.
ರಕ್ಷಣಾ ಕಾರ್ಯಾಚರಣೆಯ ವೇಳೆ ಸ್ಥಳದಲ್ಲಿದ್ದ ಪಂಜಾಬ್ ಕಾರಗ್ರಹ ಸಚಿವ ಡಾ. ರವಜೋತ್ ಸಿಂಗ್ ಹಾಗೂ ಹೋಶಿಯಾರ್ಪುರ ಲೋಕಸಭಾ ಸದಸ್ಯ ಡಾ. ರಾಜ್ ಕುಮಾರ್ ಚಬ್ಬೇವಾಲ್ ರಕ್ಷಣಾ ತಂಡಗಳ ಅವಿರತ ಶ್ರಮವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧಿಕಾರಿಗಳ ಪ್ರಕಾರ, 40ಕ್ಕೂ ಹೆಚ್ಚು ಸದಸ್ಯರಿದ್ದ ಎನ್ಡಿಆರ್ಎಫ್ ತಂಡದ ಪರಿಣತಿ ಮತ್ತು ನಿರಂತರ ಪ್ರಯತ್ನದಿಂದ ಈ ಸೂಕ್ಷ್ಮ ಕಾರ್ಯಾಚರಣೆ ಯಶಸ್ವಿಯಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh.M.B.