
ವಿಜಯಪುರ, 16 ಮೇ (ಹಿ.ಸ.) :
ಆಂಕರ್ : ೨೦೨೬ರ ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಹಿರಿಯೂರು ಕಾಲೇಜ್ ಆಫ್ ಹಾರ್ಟಿಕಲ್ಚರ್ ಪರೀಕ್ಷಾ ಕೇಂದ್ರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗಂಭೀರ ಆರೋಪ ಮಾಡಿದೆ. ಪರೀಕ್ಷಾ ಫಲಿತಾಂಶಗಳಲ್ಲಿ ಕಂಡುಬಂದಿರುವ ಅಸಾಮಾನ್ಯ ಅಂಕಗಳ ಮಾದರಿಯನ್ನು ಉಲ್ಲೇಖಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಮಗ್ರ ತನಿಖೆ ನಡೆಸಬೇಕೆಂದು ಸಂಘಟನೆ ಆಗ್ರಹಿಸಿದೆ.
ಈ ಕುರಿತು ರಾಜ್ಯ ಉಪಾಧ್ಯಕ್ಷರಾದ ಶಾಂತಗೌಡ ಪಾಟೀಲ ನಡಹಳ್ಳಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಹಿರಿಯೂರು ಕೇಂದ್ರದಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳು ಇತರ ಕೇಂದ್ರಗಳಿಗಿಂತ ಭಿನ್ನವಾಗಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ೨೦೦, ೧೯೬, ೧೯೨ ಮುಂತಾದ ಅತ್ಯಧಿಕ ಅಂಕಗಳನ್ನು ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ಇತರ ಸಮಾನ ವಿದ್ಯಾರ್ಥಿ ಸಂಖ್ಯೆಯ ಕೇಂದ್ರಗಳಲ್ಲಿ ಇಂತಹ ಅಂಕಗಳ ಪ್ರಮಾಣ ಅತ್ಯಂತ ಕಡಿಮೆ ಇರುವುದರಿಂದ, ಪರೀಕ್ಷೆಯ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಬಗ್ಗೆ ಗಂಭೀರ ಅನುಮಾನಗಳು ಮೂಡಿವೆ ಎಂದು ಆರೋಪಿಸಲಾಗಿದೆ.
ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರು ಪರೀಕ್ಷಾ ಸಮಯದಲ್ಲಿ ಅಕ್ರಮ ಸಹಾಯ, ನಿಯಮ ಉಲ್ಲಂಘನೆ ಅಥವಾ ನಕಲು ನಡೆದಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿರುವುದಾಗಿ ಸಂಘಟನೆ ತಿಳಿಸಿದೆ.
ಮನವಿಯಲ್ಲಿ ಕೆಇಎಗೆ ಹಲವು ಬೇಡಿಕೆಗಳನ್ನು ಮುಂದಿರಿಸಲಾಗಿದ್ದು, ಹಿರಿಯೂರು ಕೇಂದ್ರದಲ್ಲಿ ನಡೆದ ಪರೀಕ್ಷೆಯ ಕುರಿತು ಕಟ್ಟುನಿಟ್ಟಿನ ತನಿಖೆ ನಡೆಸಬೇಕು, ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು, ಮೇಲ್ವಿಚಾರಣೆ ಕ್ರಮ ಹಾಗೂ ಪರೀಕ್ಷಕರ ನಡೆ-ನುಡಿಗಳ ಕುರಿತು ಪರಿಶೀಲನೆ ನಡೆಸಬೇಕು ಹಾಗೂ ಪರೀಕ್ಷಾ ನಿಯಮಗಳು ಸರಿಯಾಗಿ ಪಾಲಿಸಲ್ಪಟ್ಟಿದೆಯೇ ಎಂಬುದನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ.
ಯಾವುದೇ ಅಕ್ರಮ ಅಥವಾ ನಿರ್ಲಕ್ಷ್ಯ ಪತ್ತೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಯಾಗಿರುವುದರಿಂದ, ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಹಾಗೂ ನ್ಯಾಯ ದೊರಕುವಂತೆ ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆಯನ್ನು ಕಾಪಾಡುವುದು ಅತ್ಯಗತ್ಯವಾಗಿದೆ ಎಂದು ಸಂಘಟನೆ ತಿಳಿಸಿದೆ.
ಈ ವಿಷಯವನ್ನು ಕೆಇಎ ಗಂಭೀರವಾಗಿ ಪರಿಗಣಿಸಿ, ನ್ಯಾಯಯುತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯದ ೩೧ ಜಿಲ್ಲೆಗಳಿಂದ ಹೋರಾಟ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ದಿವ್ಯ ಚವಾಣ್, ಸುಶ್ಮಿತಾ ಕೊಳ್ಳಿ, ರೇಣುಕಾ ಶಿರಗುಪ್ಪಿ, ಭಾಗ್ಯಶ್ರೀ ರಾಜಪುಟ್, ರಕ್ಷಿತಾ ಇಂಗ್ನಲ್, ಭುವನೇಶ್ವರಿ ಜಮಾದಾರ್, ಶೃಷ್ಟಿ ಜಾಲಗೇರಿ, ಸೌಂದರ್ಯ ಜಾಲಗೇರಿ, ಸೀಮಾ ಚವಾಣ್, ಮಾಂತೇಶ ಜಂಗಮಶೇಟ್ಟಿ, ದರ್ಶನ್ ಕುರ್ಬುರ್, ಸರ್ವೇಶ್ ಗುಜರಿ, ಅಮೃತ್ ಕೋಟ್ಯಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande