
ಹುಬ್ಬಳ್ಳಿ, 16 ಮೇ (ಹಿ.ಸ.) :
ಆ್ಯಂಕರ್ : ಸನಾತನ ಹಿಂದೂ ಧರ್ಮ ಉಳಿವಿಗೆ ಸಂಘಟನೆ ಅಗತ್ಯ. ಈ ಹಿನ್ನೆಲೆಯಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ಶಿರೂರ ಪಾರ್ಕ್ನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ (ಎಸ್ಎಎಸ್ಎಸ್) ವತಿಯಿಂದ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 70 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಭಕ್ತರ ಪರವಾದ ಸಂಘಟನೆ ಅಗತ್ಯವಿತ್ತು. ಅಲ್ಲಿಯ ಕುಂದುಕೊರತೆ ನಿವಾರಣೆ, ಭಕ್ತರ ಬಯಕೆ ಈಡೇರಿಕೆಗೆ ಈ ಸಂಘಟನೆ ಕಾರ್ಯತತ್ಪರವಾಗಿದೆ. ಅನೇಕ ಬದಲಾವಣೆಗಳನ್ನು ತರಲಾಗಿದೆ. ಜಗತ್ತಿನಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಇರುವುದು ಇದೇ ಕಾರಣಕ್ಕೆ. ಹಿಂದೂಗಳಾದ ನಾವೆಲ್ಲ ಒಗ್ಗಟ್ಟಾಗಿರಬೇಕು ಎಂದು ಆಶಿಸಿದರು.
ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ, ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಉಪಾಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ಶಬರಿಮಲೈ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಹಳಷ್ಟು ಭಕ್ತರು ತೆರಳುತ್ತಾರೆ. ಅಲ್ಲಿಯ ಕುಂದುಕೊರತೆ, ಆಗು-ಹೋಗುಗಳನ್ನು ಸೇವಾ ಸಮಾಜಂ ನೋಡಿಕೊಳ್ಳುತ್ತಿದೆ. ತ್ಯಾಗ ಮತ್ತು ಶ್ರದ್ಧೆಯಿಂದ ಸೇವೆ ಮಾಡುತ್ತಿದೆ. ಇಂದು ನಡೆಯುತ್ತಿರುವ ಕಾರ್ಯಕಾರಿಣಿಯಲ್ಲಿ ಚಿಂತನ-ಮಥನ ನಡೆಸಿ, 6 ತಿಂಗಳೊಳಗೆ ಕಾರ್ಯಾನುಷ್ಠಾನ ಆಗಬೇಕು. ಇದರಿಂದ ಸಮಾಜ ಹಾಗೂ ಭಕ್ತರಿಗೆ ಒಳಿತಾಗಲಿದೆ. ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಕಾರಣೀಭೂತರಾದ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರಿಗೆ ಡಾ. ಪ್ರಸಾದ ಅವರು ಅಭಿನಂದನೆ ಸಲ್ಲಿಸಿದರು.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮಾತನಾಡಿ, ನಮ್ಮ ಸನಾತನ ಧರ್ಮದ ಮೇಲೆ ಹಲವರಿಂದ ದಾಳಿಗಳಾಗಿವೆ. ಅದರಲ್ಲೂ ಹಿಂದೂಗಳ ಆತ್ಮವಾಗಿರುವ ದೇವಸ್ಥಾನ ಮತ್ತು ಮಠಗಳ ಮೇಲೆ ದಾಳಿಯಾಗಿವೆ. ನಾವೆಲ್ಲ ಹಿಂದೂಗಳು ಜಾಗೃತರಾಗಬೇಕು. ಹಿಂದೂಗಳಿಗೆ ಆಗುತ್ತಿರುವ ಅಪಮಾನ, ಅಪಚಾರ, ಅಕ್ರಮಗಳನ್ನು ತಡೆಯಬೇಕು. ಈ ನಿಟ್ಟಿನಲ್ಲಿ ನಾವು ಸಂಘಟಿತರಾಗಬೇಕು ಎಂದರು.
ಎಸ್ಎಎಸ್ಎಸ್ ಕರ್ನಾಟಕ ಸಂಯೋಜಕ ಪಿ.ಎಸ್. ಪ್ರಕಾಶ ಮಾತನಾಡಿ, ದೇವಸ್ಥಾನಗಳು ನಮ್ಮ ಭಕ್ತಿ ಮತ್ತು ಶಕ್ತಿಯ ಕೇಂದ್ರಗಳು. ಭಾರತೀಯ ಹಿಂದೂ ಸಮಾಜ ಭಕ್ತಿ ಮತ್ತು ಶಕ್ತಿಯ ಸಮ್ಮಿಲನವಾಗಿದೆ. ನಾವು ಎರಡನ್ನೂ ಸಂಘಟಿತಗೊಳಿಸಬೇಕು. ಇದರಿಂದ ನಮ್ಮ ಜೀವನ ಬೆಳಕಿನ ಕಡೆಗೆ ಹೋಗುತ್ತದೆ ಎಂದರು.
ಸಭೆಯಲ್ಲಿ ದೇವಸ್ಥಾನದ ಧರ್ಮದರ್ಶಿ ಆನಂದ ಗುರುಸ್ವಾಮಿ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಮೇಯರ್ ವೀಣಾ ಬರದ್ವಾಡ, ರಾಷ್ಟ್ರೀಯ ಕಾರ್ಯಕಾರಿ ಟಿ.ಬಿ. ಶೇಖರ್, ಪ್ರಮುಖರಾದ ಎ.ಆರ್. ಮೋಹನ, ಸೆಲ್ವನ್ ಮುರುಘನ್, ಪ್ರಕಾಶ ಗಣಪತಿ ಪೈ, ಈರೋಡು ಎನ್. ರಾಜನ್, ದೊರೈಶಂಕರ, ವಿನೋದ, ಡಾ.ಎನ್. ಜಯರಾಂ, ಶರಣಕುಮಾರ ಶೆಟ್ಟಿ, ಪಿ. ದೇವರಾಜು, ಎಂ. ಮುನಿರಾಜು, ಎಚ್.ಆರ್. ಸಂಪತಕುಮಾರ, ಡಾ. ರಮೇಶ ಮುಧೋಳ, ದತ್ತು ಶಿಂತ್ರೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.