









ಕುಡತಿನಿ, 16 ಮೇ (ಹಿ.ಸ.) :
ಆ್ಯಂಕರ್ : ಕೆಐಡಿಬಿ ಪಡೆದಿದ್ದ ಭೂಮಿಯನ್ನು ಜಿಂದಾಲ್ ಕಂಪನಿಗೆ ಪರಭಾರೆ ಮಾಡಿರುವುದನ್ನು ವಿರೋಧಿಸಿ ಒಂಭತ್ತು ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ಎತ್ತು-ಬಂಡಿಗಳ ಜೊತೆಯಲ್ಲಿ ತಮ್ಮ ಭೂಮಿ ಪ್ರವೇಶಕ್ಕೆ ಮುಂದಾಗಿದ್ದ ಮಹಿಳಾ ಮತ್ತು ಪುರುಷ ಕೃಷಿಕರನ್ನು ಪೊಲೀಸರು ಶನಿವಾರ ತಡೆದು, ವಶಕ್ಕೆ ಪಡೆದಿದ್ದಾರೆ.
ಕೆಐಡಿಬಿಯು ನೀಡಿದ್ದ ನಿಷೇಧಾಜ್ಞೆ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ ಹನುಮಂತಪ್ಪ ಮತ್ತು ಸುಶೀಲಮ್ಮ ಅವರು, ತಮ್ಮ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಶನಿವಾರ ನಡೆಸಲು ನಿರ್ಧರಿಸಿ, ಭೂ ಸಂತ್ರಸ್ತರ ಹೋರಾಟದಲ್ಲಿ ಸಕ್ರಿಯವಾಗಿರುವ ಸಹ ಪ್ರತಿಭಟನಾಕಾರರ ಜೊತೆಗೂಡಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಎತ್ತು-ಬಂಡಿಗಳ ಜೊತೆಯಲ್ಲಿ ಮಹಿಳಾ - ಪುರುಷ ಕೃಷಿಕರನ್ನು ಸೇರಿಸಿಕೊಂಡು ತಮ್ಮ ಭೂಮಿಯಲ್ಲಿ ಕುಂಟೆ, ರಂಟೆ, ಬಿತ್ತನೆ ನಡೆಸಲು ಭೂಮಿ ಪ್ರವೇಶಕ್ಕೆ ಮುಂದಾಗಿದ್ದರು.
ಈ ಸಂದರ್ಭದಲ್ಲಿ ಪೊಲೀಸರು ಆಗಮಿಸಿ, ಭದ್ರತೆಯ ಕಾರಣ ನೀಡಿ ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸ್ ರಿಜರ್ವ್ ವ್ಯಾನ್ಗಳನ್ನು ತುಂಬಿಕೊಂಡು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಆದರೆ, ಪೊಲೀಸರು ಚಳವಳಿಗಾರರನ್ನು ವಶಕ್ಕೆ ಪಡೆಯುವಾಗ, ಮಾತಿನ ಚಕಮಕಿ ನಡೆದು ಪರಸ್ಪರ ಸಂಘರ್ಷವು ನಡೆದಿದೆ.
ಚಳವಳಿಗಾರರಲ್ಲಿ ಉಪ್ಪಾರ ಯಲ್ಲಪ್ಪ (40), ವಾಲ್ಮೀಕಿ ಕನ್ನಕೇರಿ ಭೀಮಣ್ಣ (50) ಅವರಿಗೆ ರಕ್ತ ಗಾಯಗಳಾಗಿದ್ದು, ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ. ಆಸ್ಪತ್ರೆಯಲ್ಲಿಯೇ ಪೊಲೀಸ್ ದೌರ್ಜನ್ಯದ ಪ್ರಕರಣ (ಎಂಎಲ್ಸಿ) ದಾಖಲಿಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಳವಳಿಗಾರರನ್ನು ಪೊಲೀಸರು ವಶದಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಪರಿಸ್ಥಿತಿ ಕೆಲಕಾಲ ಬಿಗಿವಿನಿಂದ ಕೂಡಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್