
ಚಿತ್ರದುರ್ಗ, 16 ಮೇ (ಹಿ.ಸ.) :
ಆ್ಯಂಕರ್ : ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಜಾರಿಗೆ ತಂದಿರುವ ಎಚ್‌ಪಿವಿ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಶಿಕ್ಷಕರು ಮತ್ತು ಪೋಷಕರು ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್. ಮಂಜುನಾಥ
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಎಚ್‌ಐವಿ ಲಸಿಕಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ೮ನೇ ತರಗತಿಯಲ್ಲಿ ೧೧,೧೦೩ ಹಾಗೂ ೯ನೇ ತರಗತಿಯಲ್ಲಿ ೧೨,೪೬೨ ಹೆಣ್ಣುಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಒಟ್ಟು ೨೩,೫೬೫ ವಿದ್ಯಾರ್ಥಿನಿಯರಿಗೆ ಎಚ್‌ಪಿವಿ ಲಸಿಕೆ ನೀಡಲು ಸರ್ಕಾರ ಕಾರ್ಯಕ್ರಮ ರೂಪಿಸಿದೆ ಎಂದು ತಿಳಿಸಿದರು.
ಸರ್ಕಾರಿ, ಅನುದಾನಿತ, ಅನುದಾನರಹಿತ, ನವೋದಯ, ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿನ ಹೆಣ್ಣುಮಕ್ಕಳಿಗೆ ಈ ಲಸಿಕೆ ಲಭ್ಯವಾಗಲಿದೆ ಎಂದರು.
ಎಚ್‌ಪಿವಿ ಲಸಿಕೆಯ ಮಹತ್ವದ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ. ಇದೇ ಮೇ ೨೫ರಿಂದ ೩೦ರವರೆಗೆ ಎಲ್ಲಾ ಶಾಲೆಗಳಲ್ಲಿ ಪೋಷಕರ ಹಾಗೂ ಶಿಕ್ಷಕರ ವಿಶೇಷ ಸಭೆ ನಡೆಸಬೇಕು ಎಂದು ಸೂಚಿಸಿದರು.
ಸಭೆಗಳಲ್ಲಿ ಲಸಿಕೆಯಿಂದಾಗುವ ಪ್ರಯೋಜನಗಳು ಹಾಗೂ ಅದರ ಅಗತ್ಯತೆಯನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಪ್ರೇರೇಪಿಸಬೇಕು ಎಂದರು.
ಭವಿಷ್ಯದಲ್ಲಿ ಹೆಣ್ಣುಮಕ್ಕಳಿಗೆ ಎದುರಾಗಬಹುದಾದ ಗರ್ಭಕಂಠದ ಕ್ಯಾನ್ಸರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಉಚಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯ ಯಾವುದೇ ಅರ್ಹ ಹೆಣ್ಣುಮಗು ಲಸಿಕೆಯಿಂದ ವಂಚಿತರಾಗಬಾರದು ಎಂದು ಮನವಿ ಮಾಡಿದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಡಿ. ಎಂ. ಅಭಿನವ ಮಾತನಾಡಿ, ಪೋಲಿಯೊ ಮತ್ತು ಚಿಕ್ಕಜ್ವರದಂತಹ ಕಾಯಿಲೆಗಳನ್ನು ಲಸಿಕಾ ಅಭಿಯಾನಗಳ ಮೂಲಕ ನಿರ್ಮೂಲನೆ ಮಾಡಿರುವಂತೆ, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಹೆಚ್ಪಿವಿ ಲಸಿಕಾ ಅಭಿಯಾನವನ್ನೂ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಕೊರೊನಾ ನಂತರ ಜನರಲ್ಲಿ ಲಸಿಕೆಗಳ ಬಗ್ಗೆ ಅರಿವು ಹೆಚ್ಚಾಗಿದ್ದರೂ, ಎಚ್‌ಪಿವಿ ಲಸಿಕೆಯ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್ನಿಂದ ರಕ್ಷಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ. ಶಾಲೆಗಳಲ್ಲಿ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಪೋಷಕರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಲಸಿಕೆಯ ಮಹತ್ವ ತಿಳಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಕಾಯಿಲೆಗಳ ತಡೆಗಾಗಿ ೧೨ ಪ್ರಮುಖ ಲಸಿಕೆಗಳನ್ನು ನೀಡಲಾಗುತ್ತಿದ್ದು, ಇದೀಗ ಎಚ್‌ಪಿವಿ ಲಸಿಕೆಯನ್ನೂ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಎಚ್‌ಪಿವಿ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ. ಶೇಕಡಾ ೯೦ರಷ್ಟು ಲಸಿಕಾಕರಣ ಗುರಿ ಸಾಧಿಸಿದರೆ ಈ ಕಾಯಿಲೆಯನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ನಾಲ್ಕನೇ ಅತಿ ಸಾಮಾನ್ಯ ಕ್ಯಾನ್ಸರ್ ಆಗಿದೆ. ಪ್ರತಿವರ್ಷ ವಿಶ್ವದಾದ್ಯಂತ ಸುಮಾರು ೬.೫ ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ೩ ಲಕ್ಷಕ್ಕೂ ಹೆಚ್ಚು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾರತದಲ್ಲಿಯೂ ಪ್ರತಿ ಒಂದು ಲಕ್ಷ ಮಹಿಳೆಯರಲ್ಲಿ ೧೧ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿನ ಪ್ರಮಾಣವೂ ಹೆಚ್ಚಾಗಿದೆ ಎಂದು ಹೇಳಿದರು.
ಎಚ್‌ಪಿವಿ ಲಸಿಕೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ವದಂತಿಗಳು ಮತ್ತು ನಕಾರಾತ್ಮಕ ವಿಡಿಯೊಗಳನ್ನು ನಂಬಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಚ್‌ಪಿವಿ ಲಸಿಕಾ ಅಭಿಯಾನದ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಡಿವೈಪಿಸಿ ಹನುಮಂತಪ್ಪ, ಭಾಗ್ಯಜ್ಯೋತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ಗೋವಿಂದರೆಡ್ಡಿ, ಗೌರಮ್ಮ ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.