
ವಿಜಯಪುರ, 16 ಮೇ (ಹಿ.ಸ.) :
ಆಂಕರ್ : ಸಾರ್ವಜನಿಕ ಸಂಚಾರ ಸುಗಮವಾಗಿರಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ಜಾಗೃತಿ ಕಾರ್ಯಾಚರಣೆ ನಡೆಸಿದರು.
ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ ವಾಹನಗಳನ್ನು ಅಸಮರ್ಪಕವಾಗಿ ನಿಲ್ಲಿಸಲಾಗುತ್ತಿರುವ ಹಿನ್ನೆಲೆ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕರಿಗೆ ಹಾಗೂ ವಾಹನ ಸವಾರರಿಗೆ ಸೂಕ್ತ ಸೂಚನೆಗಳನ್ನು ನೀಡಿದರು.
ಅಂಗಡಿಗಳ ಮುಂದೆ ರಸ್ತೆ ಆವರಿಸಿಕೊಂಡು ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದಲ್ಲದೆ, ಅಪಘಾತಗಳ ಸಂಭವಕ್ಕೂ ಕಾರಣವಾಗಬಹುದು ಎಂದು ಪೊಲೀಸರು ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ವಾಹನಗಳನ್ನು ನಿಯಮಾನುಸಾರ ಪಾರ್ಕಿಂಗ್ ಮಾಡುವಂತೆ ಹಾಗೂ ರಸ್ತೆ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆ ಆಗದಂತೆ ನೋಡಿಕೊಳ್ಳುವಂತೆ ವ್ಯಾಪಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ಇದೇ ವೇಳೆ ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಹಾಗೂ ಇತರ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಅಂಗಡಿ ಮುಂಗಟ್ಟುಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿಕೊಳ್ಳುವಂತೆ ನೋಟಿಸ್ ನೀಡಲಾಯಿತು. ಸಿ.ಸಿ. ಕ್ಯಾಮರಾಗಳು ಅಳವಡಿಕೆಯಿಂದ ಅಪರಾಧ ಚಟುವಟಿಕೆಗಳ ಮೇಲೆ ನಿಗಾವಹಿಸಲು ಸಹಕಾರಿಯಾಗುತ್ತದೆ ಹಾಗೂ ತನಿಖಾ ಕಾರ್ಯಕ್ಕೂ ಅನುಕೂಲವಾಗುತ್ತದೆ ಎಂದು ಪೊಲೀಸರು ತಿಳಿಸಿದರು.
ಪೊಲೀಸರ ಈ ಜಾಗೃತಿ ಕಾರ್ಯಾಚರಣೆಗೆ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿಯೂ ಸಂಚಾರ ನಿಯಮ ಪಾಲನೆ ಹಾಗೂ ಭದ್ರತಾ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮುಂದುವರಿಯಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande