ಹಳಗೇರಿ ಗ್ರಾಮದಲ್ಲಿ ಹುಲಿಗೆಮ್ಮ ದೇವಿಯ ಅದ್ಧೂರಿ ರಥೋತ್ಸವ
ಬಾಗಲಕೋಟೆ, 16 ಮೇ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕು ವ್ಯಾಪ್ತಿಯ ಹಳಗೇರಿ ಗ್ರಾಮದಲ್ಲಿ ಆರಾಧ್ಯ ದೇವತೆ ಶ್ರೀ ಹುಲಿಗೆಮ್ಮ ದೇವಿಯ ರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಗ್ರಾಮದೆಲ್ಲೆಡೆ ಹಬ್ಬದ
ಜಾತ್ರೆ


ಬಾಗಲಕೋಟೆ, 16 ಮೇ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕು ವ್ಯಾಪ್ತಿಯ ಹಳಗೇರಿ ಗ್ರಾಮದಲ್ಲಿ ಆರಾಧ್ಯ ದೇವತೆ ಶ್ರೀ ಹುಲಿಗೆಮ್ಮ ದೇವಿಯ ರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು.

ಗ್ರಾಮದೆಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದ್ದು, ಬೆಳಗ್ಗೆಯಿಂದಲೇ ಭಕ್ತರು ದೇವಿಯ ದರ್ಶನಕ್ಕಾಗಿ ದೇವಸ್ಥಾನದತ್ತ ಹರಿದು ಬಂದರು.

ರಥೋತ್ಸವದ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಅಲಂಕೃತ ರಥದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಈ ವೇಳೆ ವಾದ್ಯಗೋಷ್ಠಿ, ಡೊಳ್ಳು ಕುಣಿತ, ಭಜನಾ ತಂಡಗಳು ಹಾಗೂ ಸಾಂಪ್ರದಾಯಿಕ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ತಂದವು.

“ಜೈ ಹುಲಿಗೆಮ್ಮ ತಾಯಿ” ಎಂಬ ಘೋಷಣೆಗಳ ನಡುವೆ ಭಕ್ತರು ಭಕ್ತಿ ಪರವಶರಾಗಿ ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.

ಮಹಿಳೆಯರು ಪೂರ್ಣಕುಂಭ ಹಾಗೂ ಆರತಿ ಮೂಲಕ ದೇವಿಯನ್ನು ಸ್ವಾಗತಿಸಿದ ದೃಶ್ಯ ಗಮನಸೆಳೆಯಿತು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.

ರಥೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಕುಡಿಯುವ ನೀರು, ಪ್ರಸಾದ ವಿತರಣೆ ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಯುವಕರ ತಂಡಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.

ಒಟ್ಟಾರೆ ಹಳಗೇರಿ ಗ್ರಾಮದ ಹುಲಿಗೆಮ್ಮ ದೇವಿಯ ರಥೋತ್ಸವವು ಧಾರ್ಮಿಕ ಸಂಭ್ರಮ, ಸಾಂಸ್ಕೃತಿಕ ವೈಭವ ಮತ್ತು ಭಕ್ತಿಭಾವದ ಸಂಕೇತವಾಗಿ ಅದ್ದೂರಿಯಾಗಿ ಜರುಗಿ ಭಕ್ತರ ಮನಸೆಳೆಯಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande