
ಬೀದರ್, 16 ಮೇ (ಹಿ.ಸ.) :
ಆ್ಯಂಕರ್ : ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಕೆ) ಗ್ರಾಮದಲ್ಲಿ ಸುಮಾರು ₹5 ಕೋಟಿ ಅನುದಾನದಡಿ ನಿರ್ಮಾಣಗೊಳ್ಳಲಿರುವ ನೂತನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕಟ್ಟಡ ಕಾಮಗಾರಿಗೆ ಸಚಿವ ಈಶ್ವರ ಖಂಡ್ರೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸೌಲಭ್ಯ ಒದಗಿಸುವುದು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು. ಸುಸಜ್ಜಿತ ಮತ್ತು ಆಧುನಿಕ ಶಾಲಾ ಕಟ್ಟಡಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ನೂತನ ಶಾಲಾ ಕಟ್ಟಡವು ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳಿಗೂ ನಗರ ಪ್ರದೇಶದ ಮಕ್ಕಳಿಗೆ ದೊರೆಯುವ ಮಟ್ಟದ ಶಿಕ್ಷಣ ಸೌಲಭ್ಯ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಮೂಲಕ ಗ್ರಾಮೀಣ ಮಕ್ಕಳ ಕನಸುಗಳಿಗೆ ಬಲ ತುಂಬುವ ಕಾರ್ಯವನ್ನು ಸರ್ಕಾರ ನಿರಂತರವಾಗಿ ಮಾಡುತ್ತಿದೆ. ಶಿಕ್ಷಣವೇ ಸಮಾಜ ಪರಿವರ್ತನೆಯ ಶಕ್ತಿಯಾಗಿದ್ದು, ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.