
ವಿಜಯಪುರ, 16 ಮೇ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಶಿವಾನಂದ ಪಾಟೀಲ್ ಚಾಲನೆ ನೀಡಿದರು.
ದೇವಸ್ಥಾನದ ಮಹಾದ್ವಾರ ಉದ್ಘಾಟನೆ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ಜನಸಾಮಾನ್ಯರ ಸಮ್ಮುಖದಲ್ಲಿ ನೆರವೇರಿದವು.
ಮುಳವಾಡ ಗ್ರಾಮದ ಸುಕ್ಷೇತ್ರ ಶ್ರೀ ಶಿವರಾಯೇಶ್ವರ ದೇವಸ್ಥಾನದ ಭವ್ಯ ಮಹಾದ್ವಾರವನ್ನು ಲೋಕಾರ್ಪಣೆಗೊಳಿಸಲಾಯಿತು. ನೂತನ ಮಹಾದ್ವಾರವು ದೇವಸ್ಥಾನದ ವೈಭವವನ್ನು ಮತ್ತಷ್ಟು ಹೆಚ್ಚಿಸಿದ್ದು, ಗ್ರಾಮಕ್ಕೆ ಹೊಸ ಕಳೆ ತಂದುಕೊಟ್ಟಿದೆ. ಭಕ್ತಾದಿಗಳು ಹಾಗೂ ಗ್ರಾಮಸ್ಥರು ಮಹಾದ್ವಾರದ ನಿರ್ಮಾಣವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ವತಿಯಿಂದ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹70 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಶ್ರೀ ಶಿವರಾಯೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ಸುಮಾರು 1.50 ಕಿಲೋಮೀಟರ್ ಉದ್ದದ ಆಂತರಿಕ ರಸ್ತೆಯನ್ನು ಗ್ರಾಮೀಣ ರಸ್ತೆ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಗ್ರಾಮಸ್ಥರ ಬಹುಕಾಲದ ಕನಸು ನನಸಾಗುತ್ತಿದೆ.
ಗ್ರಾಮದ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ಮಾರ್ಗ ಅಭಿವೃದ್ಧಿಯಾಗುವುದರಿಂದ ಸಾರ್ವಜನಿಕರ ಸಂಚಾರ ಸುಗಮವಾಗಲಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಮಳೆಗಾಲದಲ್ಲಿ ರಸ್ತೆ ಸಮಸ್ಯೆಯಿಂದ ಬಳಲುತ್ತಿದ್ದ ಗ್ರಾಮಸ್ಥರಿಗೆ ಈ ಕಾಮಗಾರಿ ಆಶಾಕಿರಣವಾಗಿದೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖಂಡರು, “ಅಭಿವೃದ್ಧಿಯೇ ನಮ್ಮ ಮೂಲಮಂತ್ರ. ಗ್ರಾಮೀಣ ಭಾಗದ ಜನರಿಗೆ ಉತ್ತಮ ರಸ್ತೆ, ಕುಡಿಯುವ ನೀರು, ದೇವಸ್ಥಾನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಪ್ರಮುಖ ಗುರಿ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಅಭಿವೃದ್ಧಿಯ ಸ್ಪರ್ಶ ತಲುಪಿಸಲಾಗುವುದು,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ್, ಮುಳವಾಡದ ಮಾಜಿ ಪ್ರಧಾನರಾದ ಎಸ್.ಆರ್. ಪಾಟೀಲ್, ದೇವಸ್ಥಾನ ಕಮೀಟಿಯ ಅಧ್ಯಕ್ಷ ವೇಂಕನಗೌಡ ಮಾ. ಪಾಟೀಲ್, ದೇವಸ್ಥಾನ ಸಮಿತಿಯ ಸದಸ್ಯರು, ಗ್ರಾಮದ ಹಿರಿಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಗ್ರಾಮದಲ್ಲಿ ನಡೆದ ಈ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸ್ಥಳೀಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande