ಸಾಧನಾ ಸಮಾವೇಶ ನಡೆಸುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ : ಆರ್.ಅಶೋಕ
ಬೆಂಗಳೂರು, 16 ಮೇ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಅನಾಥರು, ವೃದ್ಧರು, ವಿಧವೆಯರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಅಸಹಾಯಕ ವರ್ಗಗಳಿಗೆ ನೀಡಬೇಕಾದ ಸಹಾಯಧನ ಹಾಗೂ ಪಿಂಚಣಿಗಳನ್ನು ಸ್ಥಗಿತಗೊಳಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಸಾಧನಾ ಸಮಾವೇಶ ನಡೆಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಪ
ಅಶೋಕ


ಬೆಂಗಳೂರು, 16 ಮೇ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಅನಾಥರು, ವೃದ್ಧರು, ವಿಧವೆಯರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಅಸಹಾಯಕ ವರ್ಗಗಳಿಗೆ ನೀಡಬೇಕಾದ ಸಹಾಯಧನ ಹಾಗೂ ಪಿಂಚಣಿಗಳನ್ನು ಸ್ಥಗಿತಗೊಳಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಸಾಧನಾ ಸಮಾವೇಶ ನಡೆಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಸಮಾವೇಶಗಳ ಮೂಲಕ ಸಂಭ್ರಮಾಚರಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಭಿಕ್ಷುಕರು, ವೃದ್ಧರು ಹಾಗೂ ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ನೀಡಬೇಕಾದ ಹಣವನ್ನು ಹಲವು ತಿಂಗಳಿಂದ ಬಿಡುಗಡೆ ಮಾಡಿಲ್ಲ. ಗೃಹಲಕ್ಷ್ಮಿ ಯೋಜನೆಯ ೫ ಸಾವಿರ ಕೋಟಿ ರೂಪಾಯಿ ಹಾಗೂ ಅನ್ನಭಾಗ್ಯ ಯೋಜನೆಯ ೭೦೦ ಕೋಟಿ ರೂಪಾಯಿ ಇನ್ನೂ ಜನರಿಗೆ ತಲುಪಿಲ್ಲ ಎಂದು ದೂರಿದರು.

ಅನಾಥ ಮಕ್ಕಳಿಗಾಗಿ ಮೀಸಲಿಟ್ಟ ೭೩ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿಲ್ಲ. ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿದ್ದ ೪೫ ಸಾವಿರ ಕೋಟಿ ರೂಪಾಯಿ ದುರುಪಯೋಗವಾಗಿದೆ. ರೈತರಿಗೆ ಸಮೀಕ್ಷೆಯ ಹೆಸರಿನಲ್ಲಿ ಪರಿಹಾರ ನೀಡುವುದನ್ನೂ ವಿಳಂಬ ಮಾಡಲಾಗಿದೆ ಎಂದು ಆರೋಪಿಸಿದರು.

ಕಂದಾಯ ಇಲಾಖೆಯಡಿ ಬರುವ ೧೨ ಬಗೆಯ ಪಿಂಚಣಿಗಳನ್ನು ಮೂರು ತಿಂಗಳಿಂದ ನೀಡಿಲ್ಲ. ಈ ಯೋಜನೆಗಳ ಅಡಿಯಲ್ಲಿ ೮೧.೮೮ ಲಕ್ಷ ಫಲಾನುಭವಿಗಳಿದ್ದು, ಪ್ರತಿ ತಿಂಗಳು ೮೯೪ ಕೋಟಿ ರೂಪಾಯಿ ಬಿಡುಗಡೆ ಆಗಬೇಕಿದೆ. ವಾರ್ಷಿಕ ಬಜೆಟ್ನಲ್ಲಿ ೧೦,೭೩೬ ಕೋಟಿ ರೂಪಾಯಿ ಮೀಸಲಿದ್ದರೂ ಅದು ಜನರಿಗೆ ತಲುಪಿಲ್ಲ ಎಂದು ಟೀಕಿಸಿದರು.

ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುವ ಸಹಾಯಧನ ಸೇರಿದಂತೆ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ. ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ನೀಡಬೇಕಾದ ಮಾಸಿಕ ೧೦ ಸಾವಿರ ರೂಪಾಯಿಯೂ ನಿಯಮಿತವಾಗಿ ತಲುಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವದಾಸಿಯರಿಗೆ ೨ ಸಾವಿರ ರೂಪಾಯಿ, ಸ್ವಾತಂತ್ರ್ಯ ಹೋರಾಟಗಾರರಿಗೆ ೧೦ ಸಾವಿರ ರೂಪಾಯಿ ಸೇರಿದಂತೆ ಹಲವು ಯೋಜನೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಆಶಾ ಕಾರ್ಯಕರ್ತೆಯರಿಗೆ ೧೦ ಸಾವಿರ ರೂಪಾಯಿ ಗೌರವಧನ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಮಾತು ತಪ್ಪಿದೆ ಎಂದು ಹೇಳಿದರು.

ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸದ ಕಾರಣ ಪದೇಪದೇ ಮುಷ್ಕರ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಗಳಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುವಂತೆ ಸೂಚಿಸಿದರೂ ಸಚಿವರು ಕಮಿಷನ್ ವ್ಯವಹಾರಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಘೋಷಿಸಿರುವ ಇ-ಖಾತಾ ಹಾಗೂ ಬಿ-ಖಾತಾವನ್ನು ಎ-ಖಾತಾಗೆ ಪರಿವರ್ತಿಸುವ ಅಭಿಯಾನದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳು ಫೋನ್ಪೇ ಮೂಲಕ ಲಂಚ ಪಡೆಯುತ್ತಿದ್ದಾರೆ ಎಂದು ದಾಖಲೆ ಸಮೇತ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಅಕ್ರಮ ಬಾಂಗ್ಲಾದೇಶೀಯರ ಸಮಸ್ಯೆ ಗಂಭೀರವಾಗಿದ್ದು, ೧೦ ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶೀಯರು ಕರ್ನಾಟಕದಲ್ಲಿದ್ದಾರೆ ಎಂದು ಆರ್.ಅಶೋಕ ಆರೋಪಿಸಿದರು. ಮಹದೇವಪುರ, ಚಿಕ್ಕಮಗಳೂರು ಹಾಗೂ ಕೊಡಗಿನ ಕಾಫಿ ತೋಟಗಳಲ್ಲಿ ಸಾವಿರಾರು ಮಂದಿ ನೆಲೆಸಿದ್ದಾರೆ ಎಂದು ಹೇಳಿದರು.

ಎಸ್ಐಆರ್ ವಿರುದ್ಧ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದು ಬಾಂಗ್ಲಾದೇಶೀಯರ ಮತಗಳ ಮೇಲಿನ ರಾಜಕೀಯ ಲಾಭದಾಸೆಗಾಗಿ ಎಂದು ಟೀಕಿಸಿದರು. ಗುರುತಿನ ಚೀಟಿ ಹೊಂದಿರುವ ನಿಜವಾದ ಮತದಾರರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande