ನೀಟ್ : ರಾಜ್ಯದ ಸಿಇಟಿ ಮಾದರಿಯೇ ಸೂಕ್ತ-ಶರಣಪ್ರಕಾಶ ಪಾಟೀಲ
ಬೆಂಗಳೂರು, 16 ಮೇ (ಹಿ.ಸ.) : ಆ್ಯಂಕರ್ : ಇತ್ತೀಚೆಗೆ ನೀಟ್ ಪ್ರಶ್ನೆ ಸೋರಿಕೆಯಾಗಿದ್ದು, ಇಡೀ ವಿದ್ಯಾರ್ಥಿ ಸಮೂಹಕ್ಕೆ ಮಾಡಿರುವ ಬಹುದೊಡ್ಡ ಅನ್ಯಾಯವಾಗಿದೆ. ವೈದ್ಯರಾಗಬೇಕು ಎಂಬ ಸಾವಿರಾರು ಕನಸುಗಳನ್ನು ಹೊತ್ತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೇಂದ್ರ ಸರ್ಕಾರ ಕೊಳ್ಳಿ ಇಟ್ಟಿದೆ ಎಂದು ವೈದ್ಯಕೀಯ ಶಿಕ್ಷ
Patil


ಬೆಂಗಳೂರು, 16 ಮೇ (ಹಿ.ಸ.) :

ಆ್ಯಂಕರ್ : ಇತ್ತೀಚೆಗೆ ನೀಟ್ ಪ್ರಶ್ನೆ ಸೋರಿಕೆಯಾಗಿದ್ದು, ಇಡೀ ವಿದ್ಯಾರ್ಥಿ ಸಮೂಹಕ್ಕೆ ಮಾಡಿರುವ ಬಹುದೊಡ್ಡ ಅನ್ಯಾಯವಾಗಿದೆ. ವೈದ್ಯರಾಗಬೇಕು ಎಂಬ ಸಾವಿರಾರು ಕನಸುಗಳನ್ನು ಹೊತ್ತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೇಂದ್ರ ಸರ್ಕಾರ ಕೊಳ್ಳಿ ಇಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಟೀಕಿಸಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದರು.

ನೀಟ್ ಬದಲು ಕರ್ನಾಟಕದಲ್ಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಅತ್ಯುತ್ತಮ ಮಾದರಿಯಾಗಿದೆ. ಇದನ್ನು ಅಳವಡಿಸಿಕೊಂಡರೆ ಉತ್ತಮ. ಈ ಬಗ್ಗೆ ನಾವು ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೂ ಕೇಂದ್ರ ಸರ್ಕಾರ ಗಮನ ವಹಿಸಿಲ್ಲ ಎಂದರು.

ಪ್ರತಿ ವರ್ಷವೂ ನೀಟ್ ವೇಳೆ ಗೊಂದಲಗಳು ಆಗುತ್ತಲೇ ಇವೆ. ಈ ಬಾರಿ ಆಗಿರುವ ಅನಾಹುತಕ್ಕೆ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಬೇಕು. ನ್ಯಾಯಾಲಯದ ನಿರ್ದೇಶದಲ್ಲಿಯೇ ತನಿಖೆ ನಡೆಯಬೇಕು ಎಂದು ಡಾ. ಪಾಟೀಲ್ ಆಗ್ರಹಿಸಿದರು.

ನೀಟ್ ಪರೀಕ್ಷೆಯನ್ನು ಯದ್ವಾತದ್ವಾ ನಡೆಸುತ್ತಿರುವ ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಈಗ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಮೇಲೂ ನಮಗೆ ನಂಬಿಕೆ ಇಲ್ಲ. ಪಾರದರ್ಶಕವಾಗಿ ತನಿಖೆ ಕೂಡ ನಡೆಯುವುದಿಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಎಂಬಿಬಿಎಸ್ ಸೀಟು ಮಾರಿಕೊಳ್ಳಲು ಈ ರೀತಿ ಹಗರಣ ನಡೆಸಲಾಗುತ್ತಿದೆ. ಒಟ್ಟಾರೆ ಪ್ರಕರಣದ ಹಿಂದೆ ದೊಡ್ಡ ದೊಡ್ಡವರೇ ಇದ್ದಾರೆ ಎಂಬ ಗುಮಾನಿ ಇದೆ ಎಂದು ತಿಳಿಸಿದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ರಾಜ್ಯ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುವುದು ನೋಡಿದರೆ ಇವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ ಎಂದು ಸ್ಪಷ್ಟವಾಗುತ್ತದೆ ಎಂದರು ಕಿಡಿಕಾರಿದರು.

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಿಜೆಪಿಗರು ನಿಸ್ಸೀಮರು. ಹಿಂದಿನ ಸರ್ಕಾರದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಹಗರಣ ಆಗಿತ್ತು. ಈಗ ನೀಟ್ ಹಗರಣ. ಯುವ ಸಮುದಾಯವನ್ನು ಹಾದಿ ತಪ್ಪಿಸುವುದೇ ಬಿಜೆಪಿಗರ ಕಾಯಕವಾಗಿದೆ ಎಂದು ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande