
ವಿಜಯಪುರ, 16 ಮೇ (ಹಿ.ಸ.) :
ಆಂಕರ್ : ನೀಟ್ ಯುಜಿ ೨೦೨೬ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ) ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ತಂದಿರುವ ಈ ಗಂಭೀರ ಪ್ರಕರಣದ ವಿರುದ್ಧ ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ನಾಗರಾಜ ಕಬಾಡೆ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಅದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರವಾನಿಸುವಂತೆ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಾಗರಾಜ ಕಬಾಡೆ, “ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ಒಂದು ಪರೀಕ್ಷೆಯ ಅಕ್ರಮವಲ್ಲ, ಇದು ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಮೇಲೆ ನಡೆದ ದೊಡ್ಡ ದಾಳಿ. ಲಕ್ಷಾಂತರ ವಿದ್ಯಾರ್ಥಿಗಳು ವೈದ್ಯರಾಗುವ ಕನಸನ್ನು ಹೊತ್ತು ಹಗಲು-ರಾತ್ರಿ ಶ್ರಮಪಟ್ಟು ಪರೀಕ್ಷೆ ಬರೆದಿದ್ದಾರೆ.
ಆದರೆ, ಪರೀಕ್ಷೆಯ ಪಾರದರ್ಶಕತೆ ಕಾಪಾಡಲು ವಿಫಲವಾದ ವ್ಯವಸ್ಥೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದೆ” ಎಂದು ಆರೋಪಿಸಿದರು.
ಅವರು ಮುಂದುವರೆದು, “ಮೇ ೦೩ರಂದು ದೇಶದಾದ್ಯಂತ ಸುಮಾರು ೨೩ ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದರು. ವಿದ್ಯಾರ್ಥಿಗಳ ಜೊತೆಗೆ ಅವರ ಪೋಷಕರೂ ಸಮಯ, ಹಣ, ಪರಿಶ್ರಮ ಹಾಗೂ ಮಾನಸಿಕ ನೆಮ್ಮದಿಯನ್ನು ಈ ಪರೀಕ್ಷೆಗೆ ಮೀಸಲಿಟ್ಟಿದ್ದರು.
ಆದರೆ, ಯಾವುದೇ ಅಕ್ರಮಗಳಿಲ್ಲದೆ ಪರೀಕ್ಷೆ ನಡೆಸಲಾಗದ ಸ್ಥಿತಿಗೆ ದೇಶದ ವ್ಯವಸ್ಥೆ ತಲುಪಿರುವುದು ಅತ್ಯಂತ ದುಃಖಕರ” ಎಂದು ಹೇಳಿದರು.
ಪ್ರವೇಶ ಪರೀಕ್ಷೆಗಳು, ನೇಮಕಾತಿ ಪ್ರಕ್ರಿಯೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಕ್ರಮಗಳು ಹೆಚ್ಚುತ್ತಿರುವ ಬಗ್ಗೆ ಕಿಡಿಕಾರಿದ ಅವರು, “ಅಕ್ರಮ ಮಾಡಿದರೂ ಶಿಕ್ಷೆಯಾಗುವುದಿಲ್ಲ ಎಂಬ ಮನೋಭಾವ ಸಮಾಜದಲ್ಲಿ ಬೆಳೆದಿದೆ. ದೇಶದ ವ್ಯವಸ್ಥೆಯನ್ನು ದುರ್ಬಲಗೊಳಿಸುವಂತಹ ಇಂತಹ ಘಟನೆಗಳು ವಿದ್ಯಾರ್ಥಿಗಳ ವಿಶ್ವಾಸವನ್ನು ಕುಗ್ಗಿಸುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ ಅವರು, “ಈ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು ತ್ವರಿತಗೊಳಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಎನ್ಟಿಎ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸಿ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ಪಾರದರ್ಶಕ ಪುನರ್ ಪರೀಕ್ಷೆಯನ್ನು ಶೀಘ್ರವಾಗಿ ನಡೆಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರು ಮತ್ತು ಸದಸ್ಯರು ಶಿಕ್ಷಣ ವ್ಯವಸ್ಥೆಯ ಪಾರದರ್ಶಕತೆ ಕಾಪಾಡುವುದು ಸರ್ಕಾರದ ಹೊಣೆಗಾರಿಕೆ ಎಂದು ಒತ್ತಿಹೇಳಿದರು. ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡುವ ಯಾವುದೇ ಅಕ್ರಮಗಳನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭೀಮ್ ರಾಜ್ಯ ದಲಿತ್ ಸೇವಾ ಸಮೀತಿ (ರಿ) ಜಿಲ್ಲಾ ಅಧ್ಯಕ್ಷ ಶ್ರೀ ನಾಗರಾಜ ಕಬಾಡೆ, ಸಂಸ್ಥಾಪಕ ಅಧ್ಯಕ್ಷ ಅಪ್ಪುರಾಜ್ ನಿಮಾದಾರ, ನೀಲಾಂಬಿಕ ಕಟ್ಟಿಮನಿ, ಸೋಮಶೇಖರ ಕಬಾಡೆ, ರವಿ ರಾಠೋಡ, ವಿಜಯಕುಮಾರ ನಿಮಾದಾರ, ಚಂದ್ರಶೇಖರ ಕಟ್ಟಿಮನಿ, ಪ್ರಿಯಾಂಕಾ ನಿಮಾದಾರ, ಕವಿತಾ ಹೊಸಮನಿ, ಗಿರೀಶ ಕುಲಕರ್ಣಿ, ಅಬ್ದುಲ್ ಹಕ್ ಇನಾಮದಾರ, ಹುಸೇನ ಭಾಷಾ ಹಿಪ್ಪರಗಿ, ಆನಂದ ಕಾಂಬಳೆ, ರಾಘವೇಂದ್ರ ಹೊನ್ನಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande