ಪಿಂಚಣಿ ವಿಲೇವಾರಿ ; ಶೀಘ್ರದಲ್ಲೇ ಡಿಜಿಟಲೀಕರಣ ವ್ಯವಸ್ಥೆ ಜಾರಿ
ಬಳ್ಳಾರಿ, 15 ಮೇ (ಹಿ.ಸ.) : ಆ್ಯಂಕರ್ : ಪಿಂಚಣಿ ವಿಲೇವಾರಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಡೆಪ್ಯುಟಿ ಅಕೌಂಟ್ ಜನರಲ್(ಪಿಂಚಣಿ ವಿಭಾಗ) ಸಚಿನ್ ಕೃಷ್ಣ ಕೌಶಿಕ್ ಅವರು ಹೇಳಿದ್ದಾರೆ. ಅಕೌಂಟೆಂಟ
ಪಿಂಚಣಿ ವಿಲೇವಾರಿ ; ಶೀಘ್ರದಲ್ಲೇ ಡಿಜಿಟಲೀಕರಣ ವ್ಯವಸ್ಥೆ ಜಾರಿ


ಬಳ್ಳಾರಿ, 15 ಮೇ (ಹಿ.ಸ.) :

ಆ್ಯಂಕರ್ : ಪಿಂಚಣಿ ವಿಲೇವಾರಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಡೆಪ್ಯುಟಿ ಅಕೌಂಟ್ ಜನರಲ್(ಪಿಂಚಣಿ ವಿಭಾಗ) ಸಚಿನ್ ಕೃಷ್ಣ ಕೌಶಿಕ್ ಅವರು ಹೇಳಿದ್ದಾರೆ.

ಅಕೌಂಟೆಂಟ್ ಜನರಲ್ ಕಚೇರಿ ಬೆಂಗಳೂರು ಹಾಗೂ ಖಜಾನೆ ಇಲಾಖೆ ಬೆಂಗಳೂರು, ಖಜಾನೆ ಇಲಾಖೆ ಬಳ್ಳಾರಿ ಇವರ ಸಹಯೋಗದಲ್ಲಿ ನಗರದ ತಾಲ್ಲೂಕು ಆಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪಿಂಚಣಿ ಅದಾಲತ್, ಸಾಮಾನ್ಯ ಭವಿಷ್ಯ ನಿಧಿ ಅದಾಲತ್ ಹಾಗೂ ಲೆಕ್ಕಪತ್ರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಸರ್ಕಾರಿ ನೌಕರರು ತಮ್ಮ ಪಿಂಚಣಿ ಸೌಲಭ್ಯಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ವಿಳಂಬವಿಲ್ಲದೆ ಸೌಲಭ್ಯ ಒದಗಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಪಿಂಚಣಿ ಮಂಜೂರಾತಿಗೆ ದೀರ್ಘಕಾಲ ತೆಗೆದುಕೊಳ್ಳಲಾಗುತ್ತಿತ್ತು.

ಆದರೆ ಕಳೆದ ಐದಾರು ತಿಂಗಳಿನಿಂದ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದ್ದು, ಗರಿಷ್ಠ 30 ರಿಂದ 45 ದಿನಗಳೊಳಗೆ ವಿಲೇವಾರಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.

ಏಪ್ರಿಲ್ 1ರ ವೇಳೆಗೆ ಕೇವಲ 15 ಮೂಲ ಪ್ರಕರಣಗಳು ಮತ್ತು 221 ವಿಭಾಗೀಯ ಪ್ರಕರಣಗಳು ಬಾಕಿ ಇದ್ದವು. ಏಪ್ರಿಲ್ 25ರ ಸುಮಾರಿಗೆ ಸುಮಾರು 9,000 ಹೊಸ ಪ್ರಕರಣಗಳು ಬಂದಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ ಒಟ್ಟು 30,000 ಪಿಂಚಣಿ ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

ಇಲಾಖೆಯಲ್ಲಿ ಶೇ. 50 ರಷ್ಟು ಸಿಬ್ಬಂದಿ ಕೊರತೆ ಇದ್ದರೂ ಸಹ, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶನಿವಾರ ಹಾಗೂ ಭಾನುವಾರಗಳ ರಜೆ ದಿನಗಳಲ್ಲಿ ಕೆಲಸ ಮಾಡುವ ಮೂಲಕ ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ. ಮುಂದಿನ 2-3 ತಿಂಗಳುಗಳಲ್ಲಿ ಇಡೀ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವ ಗುರಿ ಹೊಂದಲಾಗಿದೆ.

ಇದರಿಂದ ಪಿಂಚಣಿದಾರರು ತಮ್ಮ ಪಿಪಿಒ ಅನ್ನು ಆನ್ಲೈನ್ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಪಾವತಿಗಾಗಿ ಖಜಾನೆಗೆ ನೇರವಾಗಿ ಸಲ್ಲಿಸಬಹುದು. ಈ ಪ್ರಕ್ರಿಯೆಯಿಂದಾಗಿ ಸ್ಪೀಡ್ ಪೆÇೀಸ್ಟ್ ಮೂಲಕ ಕಳುಹಿಸುವ ವಿಳಂಬ ತಪ್ಪಲಿದೆ ಎಂದರು.

ಬಳ್ಳಾರಿ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ ಅವಧಿಯಲ್ಲಿ ನಡೆಸಲಾಗುತ್ತಿದ್ದ ಪಿಂಚಣಿ ಅದಾಲತ್ಗಳನ್ನು ಈ ಬಾರಿ ಬೇಸಿಗೆಯಲ್ಲೇ ಆಯೋಜಿಸಲಾಗಿದೆ. ವಿಳಂಬವಾಗುತ್ತಿರುವ ಕೆಲವು ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಲು ಕನಿಷ್ಠ 15 ದಿನಗಳ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಅವರು ಮಾತನಾಡಿ, ಪಿಂಚಣಿಗಾಗಿ ಅರ್ಜಿ ಸಲ್ಲಿಸಿದರೂ ಆರು ತಿಂಗಳಿಂದ ಒಂದು ವರ್ಷದವರೆಗೆ ವಿಳಂಬವಾಗುತ್ತಿದೆ. ಇದು ತಾಂತ್ರಿಕ ಸಮಸ್ಯೆಯೋ ಅಥವಾ ಸರ್ಕಾರದ ಮಟ್ಟದ ವಿಳಂಬವೋ ತಿಳಿಯುತ್ತಿಲ್ಲ. ಅರ್ಜಿ ಸಲ್ಲಿಸಿದ 1 ರಿಂದ 3 ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು.

ಜೀವಿತ ಪ್ರಮಾಣಪತ್ರ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ಬ್ಯಾಂಕ್ ಮತ್ತು ಇಲಾಖೆಗಳ ನಡುವೆ ಅಲೆದಾಡುವುದನ್ನು ತಪ್ಪಿಸಿ, ನೇರವಾಗಿ ಬ್ಯಾಂಕ್ ಮಟ್ಟದಲ್ಲೇ ಕೆಲಸಗಳು ಸುಗಮವಾಗಿ ನಡೆಯುವಂತಾಗಬೇಕು ಎಂದರು.

ಬ್ಯಾಂಕ್ ಗಳಲ್ಲಿ ವಯಸ್ಸಾದ ಪಿಂಚಣಿದಾರರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಹಾಗಾಗಿ, ಪಿಂಚಣಿದಾರರಿಗಾಗಿಯೇ ಬ್ಯಾಂಕಿನಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ನಿವೃತ್ತ ಪಿಂಚಣಿದಾರರು ತಮ್ಮ ಸಮಸ್ಯೆಗಳನ್ನು ಅಹವಾಲುಗಳ ಮೂಲಕ ಸಲ್ಲಿಸಿದರು. ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಹಾಲೇಖಪಾಲರ ಕಚೇರಿಯ ಸೀನಿಯರ್ ಡಿ.ಎ.ಜಿ ಯಶೋದಾ, ಬೆಂಗಳೂರು ಮಹಾಲೇಖಪಾಲರ ಕಚೇರಿಯ ಸೀನಿಯರ್ ಅಕೌಂಟ್ಸ್ ಆಫೀಸರ್ ನಾಗಜ್ಯೋತಿ, ಅಕೌಂಟ್ಸ್ ಆಫೀಸರ್ ಶ್ರೀಕಾಂತ್ ಎಂ.ಜೆ., ಜಿಲ್ಲಾ ಖಜಾನೆ ಬಳ್ಳಾರಿಯ ಉಪ ನಿರ್ದೇಶಕ ಶೇಖರಪ್ಪ, ಸಹಾಯಕ ಖಜಾನಾಧಿಕಾರಿ ಪ್ರಭು ಮತ್ತು ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ ಸೇರಿದಂತೆ ವಿವಿಧ ಬ್ಯಾಂಕ್ ಗಳ ಮುಖ್ಯಸ್ಥರು, ನಿವೃತ್ತ ಪಿಂಚಣಿದಾರರು ಹಾಗೂ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande