ಎರೆಮಣ್ಣು ರಸ್ತೆಗೆ ಬಿದ್ದು ಬೂದಿಹಾಳ-ಅನಗವಾಡಿ ರಸ್ತೆ ಕೆಸರಿನ ಗದ್ದೆ
ಬಾಗಲಕೋಟೆ, 15 ಮೇ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳ-ಅನಗವಾಡಿ ಮಧ್ಯದ ರಸ್ತೆಯಲ್ಲಿ ಎರೆಮಣ್ಣು ಸಾಗಿಸುವ ವೇಳೆ ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಸಂಪೂರ್ಣ ರಸ್ತೆ ಕೆಸರಿನ ಗದ್ದೆಯಾಗಿ ಮಾರ್ಪಟ್ಟಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂ
ರಸ್ತೆ


ಬಾಗಲಕೋಟೆ, 15 ಮೇ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳ-ಅನಗವಾಡಿ ಮಧ್ಯದ ರಸ್ತೆಯಲ್ಲಿ ಎರೆಮಣ್ಣು ಸಾಗಿಸುವ ವೇಳೆ ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಸಂಪೂರ್ಣ ರಸ್ತೆ ಕೆಸರಿನ ಗದ್ದೆಯಾಗಿ ಮಾರ್ಪಟ್ಟಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಬೂದಿಹಾಳ ಭಾಗದಲ್ಲಿನ ಎರೆಮಣ್ಣನ್ನು ಕೃಷಿ ಹೊಲಗಳಿಗೆ ಸಾಗಿಸುವ ಸಂದರ್ಭದಲ್ಲಿ ಲಾರಿಗಳು ಮತ್ತು ಟ್ರ್ಯಾಕ್ಟರ್ಗಳಿಂದ ಮಣ್ಣು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದೇ ವೇಳೆ ಸುರಿದ ಮಳೆಯಿಂದ ಆ ಮಣ್ಣು ಸಂಪೂರ್ಣವಾಗಿ ತೇವಗೊಂಡು ರಸ್ತೆ ಜಾರುವಂತಾಗಿ ಮಾರ್ಪಟ್ಟಿದೆ. ಪರಿಣಾಮವಾಗಿ ರಸ್ತೆ ಮೇಲೆ ಸಂಚರಿಸುವುದು ಅಪಾಯಕಾರಿಯಾಗಿ ಪರಿಣಮಿಸಿದೆ.

ದಿ. ೧೫ರಂದು ಬೆಳಿಗ್ಗೆಯಿಂದಲೇ ಈ ರಸ್ತೆಯಲ್ಲಿ ಬೈಕ್ ಸವಾರರು ವಾಹನ ನಿಯಂತ್ರಣ ಕಳೆದುಕೊಂಡು ಪರದಾಡುತ್ತಿರುವ ದೃಶ್ಯಗಳು ಕಂಡುಬಂದವು. ಕಾಲ್ನಡಿಗೆಯಲ್ಲಿ ಸಾಗುವ ಸಾರ್ವಜನಿಕರು ಕೂಡ ಕೆಸರಿನಿಂದ ಜಾರಿ ಬೀಳುವ ಭೀತಿಯಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಾಲ್ಕು ಚಕ್ರದ ವಾಹನಗಳು ಸಹ ನಿಧಾನಗತಿಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಯಿತು.

ಗ್ರಾಮೀಣ ಭಾಗದ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಬೂದಿಹಾಳ-ಅನಗವಾಡಿ ರಸ್ತೆಯಲ್ಲಿ ಈ ರೀತಿಯ ಸಮಸ್ಯೆ ಉಂಟಾದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಅಪಾಯಕರ ಸ್ಥಿತಿಗೆ ತಲುಪಿದ್ದರೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎರೆಮಣ್ಣು ಸಾಗಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರಸ್ತೆಗೆ ಬಿದ್ದಿರುವ ಮಣ್ಣನ್ನು ತಕ್ಷಣ ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆ ಈ ರೀತಿಯ ನಿರ್ಲಕ್ಷ್ಯ ಮತ್ತಷ್ಟು ಅಪಾಯಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಶಾಲಾ ಮಕ್ಕಳು, ರೈತರು, ಕೂಲಿ ಕಾರ್ಮಿಕರು ಹಾಗೂ ವ್ಯಾಪಾರಸ್ಥರು ಇದೇ ರಸ್ತೆಯನ್ನು ಅವಲಂಬಿಸಿಕೊಂಡಿದ್ದು, ರಸ್ತೆಯ ದುಸ್ಥಿತಿಯಿಂದ ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗುತ್ತಿದೆ. ಸಂಬಂಧಿಸಿದ ಪಂಚಾಯತ್, ಲೋಕೋಪಯೋಗಿ ಇಲಾಖೆ ಹಾಗೂ ತಾಲೂಕು ಆಡಳಿತ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande