ಇಳಕಲ್ ಬೀದಿ ನಾಯಿಗಳ ಸೆರೆ ಕಾರ್ಯಾಚರಣೆ ; ಅಧಿಕಾರಿಗಳಿಂದ ವ್ಯಾಪಕ ಕ್ರಮ
ಬಾಗಲಕೋಟೆ, 13 ಮೇ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಳಕಲ್ ನಗರದ ವಿವಿಧ ಭಾಗಗಳಲ್ಲಿ ವಿಶೇಷ ನಾಯಿಗಳ ಸೆರೆ ಕಾರ್ಯಾಚರಣೆ ನಡೆಸಿದರ
Nayi


ಬಾಗಲಕೋಟೆ, 13 ಮೇ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಳಕಲ್ ನಗರದ ವಿವಿಧ ಭಾಗಗಳಲ್ಲಿ ವಿಶೇಷ ನಾಯಿಗಳ ಸೆರೆ ಕಾರ್ಯಾಚರಣೆ ನಡೆಸಿದರು.

ಜನನಿಬಿಡ ಪ್ರದೇಶಗಳು, ಪ್ರಮುಖ ಬಡಾವಣೆಗಳು, ಚಿಕನ್ ಮಾರುಕಟ್ಟೆ ಸೇರಿದಂತೆ ಹಲವೆಡೆ ನುರಿತ ಅನುಭವಿಗಳ ಸಹಾಯದಿಂದ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗುವುದು, ಮಕ್ಕಳು ಹಾಗೂ ವೃದ್ಧರ ಮೇಲೆ ದಾಳಿ ನಡೆಸುವ ಭೀತಿ ಉಂಟಾಗಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ನಗರಸಭೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯಾಚರಣೆ ಆರಂಭಿಸಿದರು.

ಕಾರ್ಯಾಚರಣೆಯ ವೇಳೆ ಬೀದಿ ನಾಯಿಗಳನ್ನು ಸುರಕ್ಷಿತ ರೀತಿಯಲ್ಲಿ ಹಿಡಿದು ಅವುಗಳಿಗೆ ಅಗತ್ಯ ವೈದ್ಯಕೀಯ ತಪಾಸಣೆ, ಲಸಿಕೆ ಹಾಗೂ ನಸಬಂದಿ ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಹಾಗೂ ಪ್ರಾಣಿಗಳಿಗೆ ಹಾನಿಯಾಗದ ರೀತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಆಹಾರ ತ್ಯಾಜ್ಯವನ್ನು ಅಸಮರ್ಪಕವಾಗಿ ವಿಲೇವಾರಿ ಮಾಡುತ್ತಿರುವುದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ ಸಾರ್ವಜನಿಕರು ಸ್ವಚ್ಛತೆ ಕಾಪಾಡಿ, ಕಸದ ಸರಿಯಾದ ವಿಲೇವಾರಿಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸ್ಥಳೀಯ ನಿವಾಸಿಗಳು ಈ ಕಾರ್ಯಾಚರಣೆಯನ್ನು ಸ್ವಾಗತಿಸಿದ್ದು, ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ನಿರಂತರ ಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande