ತಾಯಿ - ಶಿಶು ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಿ : ಡಾ.ಸುರೇಶ ಬಿ.ಇಟ್ನಾಳ್
ಕೊಪ್ಪಳ, 13 ಮೇ (ಹಿ.ಸ.) : ಆ್ಯಂಕರ್ : ಜಿಲ್ಲೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತಾಯಿ ಮತ್ತು ಶಿಶು ಮರಣ ಪ್ರಮಾಣ ದರವನ್ನು ಶೂನ್ಯಕ್ಕೆ ಇಳಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ್ ಅವರು ಹೇಳಿದರು. ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟು
ತಾಯಿ - ಶಿಶು ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಿ: ಡಾ.ಸುರೇಶ ಬಿ.ಇಟ್ನಾಳ್


ತಾಯಿ - ಶಿಶು ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಿ: ಡಾ.ಸುರೇಶ ಬಿ.ಇಟ್ನಾಳ್


ಕೊಪ್ಪಳ, 13 ಮೇ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತಾಯಿ ಮತ್ತು ಶಿಶು ಮರಣ ಪ್ರಮಾಣ ದರವನ್ನು ಶೂನ್ಯಕ್ಕೆ ಇಳಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ್ ಅವರು ಹೇಳಿದರು.

ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆ ಗರ್ಭಿಣಿ ಎಂದು ತಿಳಿದ ಕೂಡಲೇ ಆಕೆಗೆ ತಾಯಿ ಕಾರ್ಡ್ ನೀಡಲಾಗುತ್ತದೆ. ಅದರಲ್ಲಿ ಪ್ರತಿ ಮಾಹೆಯ ತಪಾಸಣೆ ಹಾಗೂ ಮಹಿಳೆಯ ಆರೋಗ್ಯದ ಕುರಿತು ವಿವರ ಇರುತ್ತದೆ. ಹೆರಿಗೆ ಸಂದರ್ಭ ತಾಯಿ ಕಾರ್ಡ್ ಮಹತ್ವದ್ದಾಗಿದ್ದು, ಹೆರಿಗೆ ಸಮಯದ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಆದಾಗ್ಯೂ ಹೆರಿಗೆ ಸಂದರ್ಭ ಮಹಿಳೆಯ ರಕ್ತದೊತ್ತಡದಲ್ಲಿನ ಏರಿಳಿತಗಳಿಂದ ಸಾವಿನಂತಹ ದುರ್ಘಟನೆ ಸಂಭವಿಸುತ್ತವೆ. ಆದ್ದರಿಂದ ಪ್ರತಿ ಮಾಹೆ ಸಂಬಂಧಿಸಿದ ಆಶಾ ಕಾರ್ಯಕರ್ತೆಯರು ಗರ್ಭಿಣಿ ಮಹಿಳೆಯ ರಕ್ತದೊತ್ತಡ, ರಕ್ತಹೀನತೆ ಸಮಸ್ಯೆಗಳನ್ನು ಪರೀಕ್ಷಿಸಿ ವೈದ್ಯರಿಂದ ಸೂಕ್ತ ಔಷಧಿ ಒದಗಿಸಬೇಕು. ರಕ್ತಹೀನತೆ ಕೂಡ ಗರ್ಭಿಣಿ ಆರೋಗ್ಯಕ್ಕೆ ಮಾರಕವಾಗಬಲ್ಲದು. ಇದರಿಂದ ಹೆರಿಗೆ ಸಂದರ್ಭ ಸಾವು ಸಂಭವಿಸಬಹುದು. ಹೆರಿಗೆ ಸಂದರ್ಭ ಫಿಜಿಸಿಯನ್ ಕಡ್ಡಾಯವಾಗಿ ಇರಬೇಕು. ಗರ್ಭಿಣಿ ಕುಟುಂಬದವರೂ ಕೂಡ ಗರ್ಭಿಣಿಯ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೆ ವೈದ್ಯರಿಗೆ ಮಾಹಿತಿ ನಿಡಬೇಕು. ಇದರಿಂದ ಅಗತ್ಯ ಚಿಕಿತ್ಸೆ ನೀಡಲು ವೈದ್ಯರಿಗೆ ಸಹಕಾರಿಯಾಗುತ್ತದೆ. ವೈದ್ಯರು ಸಹ ಯಾವುದೇ ತುರ್ತು ಪರಿಸ್ಥಿತಿಗೆ ಸಜ್ಜಾಗಿ ಹೆರಿಗೆ ಮಾಡಿಸಬೇಕು ಎಂದು ಹೇಳಿದರು.

ಮಗು ಜನನದ ನಂತರ ಮಗು ಸಂಪೂರ್ಣ ಆರೋಗ್ಯವಾಗಿದ್ದಾಗಲೂ ಜನನದ ಒಂದು ಅಥವಾ ಎರಡು ದಿನಗಳ ನಂತರ ಮಗು ಸಾವನ್ನಪುತ್ತದೆ. ಇದಕ್ಕೆ ಕಾರಣಗಳಿರಲೇಬೇಕು. ವೈದ್ಯಕೀಯ ಕಾರಣಗಳು ಏನೇ ಇದ್ದರೂ ಅಗತ್ಯ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮಗುವಿನ ಪ್ರಾಣ ಉಳಿಸಬಹುದು. ಮಗುವಿನ ಜನನದ ನಂತರ ಕಂಡು ಬರುವ ಆರೋಗ್ಯ ಸಮಸ್ಯೆಗಳಿಗೆ ಕುಟುಂಬದವರು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಬೇಕು. ಮನೆ ವೈದ್ಯ ಅಥವಾ ಮನೆ ಮದ್ದು ನೀಡುವ ಸಾಹಸ ಮಡಬಾರದು. ಈ ಬಗ್ಗೆ ಹೆರಿಗೆಯ ನಂತರ ಮಹಿಳೆಯ ಕುಟುಂಬದವರಿಗೆ ವೈದ್ಯರು ತಿಳುವಳಿಕೆ ನೀಡಬೇಕು. ಜನನ ದಿನದಿಂದ ನಿಯಮಾನುಸಾರ ಮಗುವಿಗೆ ನಿಗದಿತ ಚುಚ್ಚುಮದ್ದುಗಳನ್ನು, ಲಸಿಕೆಗಳನ್ನು ಕಡ್ಡಾಯವಾಗಿ ಮಗುವಿಗೆ ಹಾಕಿಸಬೇಕು. ಈ ಬಗ್ಗೆ ತಾಯಿ ಕಾರ್ಡ್ನಲ್ಲಿ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿಗಳು ವೈದ್ಯರಿಗೆ ಸೂಚಿಸಿದರು.

ಪಕ್ಕದ ಜಿಲ್ಲೆಗಳಿಂದ ಕೊನೆಯ ಹಂತದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿ, ವೈದ್ಯರ ಪ್ರಯತ್ನದ ನಂತರವೂ ಹೆರಿಗೆ ಸಂದರ್ಭ ಮಹಿಳೆ ಮರಣ ಹೊಂದಿದರೂ ಅದು ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಅನ್ಯ ಜಿಲ್ಲೆಗಳಿಂದ ಇಲ್ಲಿಗೆ ಬರುವ ಗರ್ಭಿಣಿಯ ಆರೋಗ್ಯ ಸಂಬಂಧಿತ ವೈದ್ಯಕೀಯ ದಾಖಲೆಗಳನ್ನು ಮತ್ತು ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡುವ ವೈದ್ಯರು ಈ ಬಗ್ಗೆ ಕರೆ ಮೂಲಕ ಇಲ್ಲಿನ ವೈದ್ಯರೊಂದಿಗೆ ಮಹಿಳೆಯ ಆರೋಗ್ಯ ತುರ್ತು ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು. ಈ ಬಗ್ಗೆ ಪಕ್ಕದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಬೇಕು ಹಾಗೂ ಸೂಕ್ತ ಮಾಹಿತಿ ನೀಡಬೇಕು. ಯಾವುದೇ ಜಿಲ್ಲೆಯ ಮಹಿಳೆಯಾದರೂ ಅವರ ಜೀವ ಉಳಿಸುವುದು ವೈದ್ಯರ ಮೊದಲ ಆದ್ಯತೆಯಾಗಬೇಕು. ಈ ಮೂಲಕ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಅವರು ಸೂಚನೆ ನೀಡಿದರು.

ಇನ್ನು ಸ್ವಲ್ಪ ದಿನಗಳಲ್ಲಿ ಮುಂಗಾರು ಆರಂಭವಾಗುತ್ತಿದ್ದು, ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ. ಮಲೇರಿಯ, ಡೆಂಗ್ಯೂ, ಚಿಕುನ್ಗುನ್ಯಾ ದಂತಹ ಖಾಯಿಲೆಗಳಿಗೆ ಕಾರಣವಾಗುವ ಸೊಳ್ಳೆಗಳ ನಿರ್ಮೂಲನೆಗೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಅಗತ್ಯ ಕ್ರಮ ವಹಿಸಿ. ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ. ಹಾವು ಕಡಿತ ಸಂದರ್ಭ ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ತಿಳುವಳಿಕೆ ನೀಡಿ. ನಾಯಿ ಕಡಿತಕ್ಕೂ ನಿಗದಿತ ಲಸಿಕೆಗಳನ್ನು ಕಡ್ಡಾಯವಾಗಿ ಪಡೆಯಬೇಕು. ಇದರೊಂದಿಗೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಮುನ್ನಚ್ಚರಿಕೆ ವಹಿಸಲು ಜಾಗೃತಿ ಕಾರ್ಯಕ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿಗಳು ವೈದ್ಯರಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ., ಜಿಲ್ಲಾ ಅನುಷ್ಠಾನಾಧಿಕಾರಿ ಡ.ರವೀಂದ್ರನಾಥ ಎಂ.ಎಚ್., ಜಿಲ್ಲಾ ಆರ್ಸಿಎಚ್ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಕಾಶ ವಿ., ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ ಎಚ್., ಜಿಲ್ಲಾ ಸರ್ವೇಕ್ಷಣಾ ಹಾಗೂ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನಂದಕುಮಾರ, ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿ ಡಾ.ಗೋನಾಳ ಕುಮಾರಸ್ವಾಮಿ, ಕೊಪ್ಪಳ ಕಿಮ್ಸ್ನ ವೈದ್ಯಕೀಯ ಅಧೀಕ್ಷಕ ಡಾ.ಮಂಜುನಾಥ, ತಜ್ಞ ವೈದ್ಯರಾದ ಡಾ.ಈಶ್ವರ ಸವಡಿ, ಫಿಜಿಶಿಯನ್ ಡಾ.ಸಂಗನಬಸಪ್ಪ, ಡಾ.ಸೋಮಶೇಖರ ಕೆ., ಜಿಲ್ಲಾ ಆಯುಷ್ ಅಧಿಕಾರಿ ಡಾ.ಪರ್ವತಗೌಡ ಹಾಗೂ ವಿವಿಧ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳು,

ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande