
ವಿಜಯಪುರ, 13 ಮೇ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದ ಸಂಭ್ರಮದ ನಡುವೆಯೇ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಪಟ್ಟಣ ಪಂಚಾಯತ್ ಸದಸ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇಡೀ ಪಟ್ಟಣದಲ್ಲಿ ಸ್ಮಶಾನ ಮೌನ ಮಾಡಿದೆ.
ಕೊಲ್ಹಾರ ಪಟ್ಟಣ ಪಂಚಾಯತ್ನ 16ನೇ ವಾರ್ಡ್ ಸದಸ್ಯ ತೌಸೀಪ್ ಗಿರಗಾಂವಿ ಅವರು ಮೃತಪಟ್ಟ ದುರ್ದೈವಿ, ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕೆಪಿಎಲ್ (KPL) ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ವೀಕ್ಷಿಸಲು ತೌಸೀಪ್ ಗಿರಗಾಂವಿ ಮೈದಾನಕ್ಕೆ ಆಗಮಿಸಿದ್ದರು.
ಪಂದ್ಯಾವಳಿಯ ಕೊನೆಯ ಕ್ಷಣಗಳು ರೋಚಕತೆಯಿಂದ ಕೂಡಿದ್ದು, ತಮ್ಮ ನೆಚ್ಚಿನ ತಂಡ ಗೆಲುವಿನತ್ತ ಸಾಗುತ್ತಿದ್ದಂತೆ ಮೈದಾನದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ತಂಡದ ಗೆಲುವು ಖಚಿತವಾಗುತ್ತಿದ್ದಂತೆಯೇ ತೌಸೀಪ್ ಗಿರಗಾಂವಿ ಅವರು ಸಹ ಮೈದಾನಕ್ಕಿಳಿದು ಆಟಗಾರರು ಹಾಗೂ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.
ಆದರೆ ಸಂತಸದ ಕ್ಷಣಗಳ ಮಧ್ಯೆಯೇ ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಘಟನೆ ಕಂಡು ಬೆಚ್ಚಿಬಿದ್ದ ಸ್ಥಳದಲ್ಲಿದ್ದವರು ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಯುವ ವಯಸ್ಸಿನಲ್ಲೇ ಜನಪ್ರತಿನಿಧಿಯಾಗಿದ್ದ ತೌಸೀಪ್ ಗಿರಗಾಂವಿ ಅವರ ಅಕಾಲಿಕ ನಿಧನ ಕೊಲ್ಹಾರ ಪಟ್ಟಣದಲ್ಲಿ ಶೋಕದ ವಾತಾವರಣ ಮೂಡಿಸಿದೆ. ಸದಾ ಜನರೊಂದಿಗೆ ಬೆರೆತು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರ ನಿಧನಕ್ಕೆ ಸ್ಥಳೀಯರು, ಸ್ನೇಹಿತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಪಂದ್ಯದ ಸಂಭ್ರಮ ಕ್ಷಣಾರ್ಧದಲ್ಲೇ ದುಃಖದ ವಾತಾವರಣಕ್ಕೆ ತಿರುಗಿದ್ದು, ಮೈದಾನದಲ್ಲಿದ್ದವರ ಕಣ್ಣೀರು ಮಿಡಿದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪಟ್ಟಣದಲ್ಲಿ ನೋವಿನ ಮೌನ ಆವರಿಸಿದೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಹಿತಿ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande