
ಬಾಗಲಕೋಟೆ, 13 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ಕೆಲವು ಸ್ವೀಟ್ ಮಾರ್ಟ್ಗಳು ಹಾಗೂ ಬೇಕರಿಗಳ ನಿರ್ಲಕ್ಷ್ಯ ಮತ್ತು ನಿಯಮ ಉಲ್ಲಂಘನೆ ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವನ್ನು ಹುಟ್ಟಿಸಿದೆ.
ಎಕ್ಸ್ಪೈರಿ ದಿನಾಂಕ ನಮೂದಿಸದೇ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ಹಾಗೂ ಸ್ಥಳೀಯ ಸಂಘಟನೆಗಳ ನಿರಂತರ ದೂರು ಮತ್ತು ಜಾಗೃತಿ ಅಭಿಯಾನದ ಫಲವಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ಇಂದು ಹಲವು ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಕೆಲ ಬೇಕರಿಗಳಲ್ಲಿ ಮಾರಾಟಕ್ಕೆ ಇಡಲಾಗಿದ್ದ ಆಹಾರ ಪದಾರ್ಥಗಳ ಮೇಲೆ ತಯಾರಿಕಾ ದಿನಾಂಕ ಹಾಗೂ ಎಕ್ಸ್ಪೈರಿ ದಿನಾಂಕ ಸ್ಪಷ್ಟವಾಗಿ ನಮೂದಿಸದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಕೆಲವು ಉತ್ಪನ್ನಗಳ ಗುಣಮಟ್ಟ ಮತ್ತು ಸಂಗ್ರಹಣೆ ಕ್ರಮಗಳ ಮೇಲೂ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಮಳಿಗೆ ಮಾಲೀಕರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ ಸಾರ್ವಜನಿಕರು ಮತ್ತು ಸಾಮಾಜಿಕ ಹೋರಾಟಗಾರರು ಈ ಕ್ರಮವನ್ನು ಸ್ವಾಗತಿಸಿದ್ದು, ಗ್ರಾಹಕರ ಆರೋಗ್ಯದೊಂದಿಗೆ ಆಟವಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
“ಲಾಭಕ್ಕಾಗಿ ಜನರ ಆರೋಗ್ಯವನ್ನು ಅಪಾಯಕ್ಕೆ ತಳ್ಳುವವರ ವಿರುದ್ಧ ನಿರಂತರ ಹೋರಾಟ ಮುಂದುವರಿಯುತ್ತದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಮ್ಮ ಜಾಗೃತಿ ಕಾರ್ಯ ಸದಾ ಇರುತ್ತದೆ. ತಪ್ಪು ಮಾಡಿದವರಿಗೆ ಕಾನೂನಿನ ಪಾಠ ಖಂಡಿತ” ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ರಬಕವಿ-ಬನಹಟ್ಟಿಯಲ್ಲಿ ಆಹಾರ ಸುರಕ್ಷತಾ ನಿಯಮಗಳ ಅನುಷ್ಠಾನ ಕುರಿತು ಮತ್ತೆ ಪ್ರಶ್ನೆಗಳು ಉದ್ಭವವಾಗಿದ್ದು, ಸಂಬಂಧಪಟ್ಟ ಇಲಾಖೆ ನಿಯಮಿತ ತಪಾಸಣೆ ನಡೆಸಿ ಜನರಿಗೆ ಸುರಕ್ಷಿತ ಆಹಾರ ದೊರಕುವಂತೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಗ್ರಾಹಕರು ಕೂಡ ಆಹಾರ ಪದಾರ್ಥಗಳನ್ನು ಖರೀದಿಸುವ ಮೊದಲು ಅವುಗಳ ಗುಣಮಟ್ಟ, ಪ್ಯಾಕಿಂಗ್ ಹಾಗೂ ಅವಧಿ ಪರಿಶೀಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande