ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿ : ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ
ವಿಜಯಪುರ, 13 ಮೇ (ಹಿ.ಸ.) : ಆಂಕರ್ : ವಿಜಯಪುರ ನಗರದ ಹೊರವಲಯದ ಭೂತನಾಳ ಕೆರೆ ಸಮೀಪ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಬಹು ನಿರೀಕ್ಷಿತ ತ್ರಿ-ಸ್ಟಾರ್ ಹೋಟೆಲ್ ಕಟ್ಟಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ.
Hotel


ವಿಜಯಪುರ, 13 ಮೇ (ಹಿ.ಸ.) :

ಆಂಕರ್ : ವಿಜಯಪುರ ನಗರದ ಹೊರವಲಯದ ಭೂತನಾಳ ಕೆರೆ ಸಮೀಪ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಬಹು ನಿರೀಕ್ಷಿತ ತ್ರಿ-ಸ್ಟಾರ್ ಹೋಟೆಲ್ ಕಟ್ಟಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಸಂಬಂಧಿತ ಅಧಿಕಾರಿಗಳು ಹಾಗೂ ಅನುಷ್ಠಾನ ಸಂಸ್ಥೆಗೆ ಸೂಚಿಸಿದರು.

ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಅವರು, ಪ್ರಸ್ತುತ ನಡೆಯುತ್ತಿರುವ ವಿವಿಧ ಸೌಲಭ್ಯಗಳ ಕಾಮಗಾರಿ ಕುರಿತು ಮಾಹಿತಿ ಪಡೆದುಕೊಂಡರು.

ರಾಜ್ಯ ಸರ್ಕಾರವು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ಈ ತ್ರಿ-ಸ್ಟಾರ್ ಹೋಟೆಲ್ ಜಿಲ್ಲೆಗೆ ಹೊಸ ಪ್ರವಾಸೋದ್ಯಮ ಉತ್ತೇಜನ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.

2019ನೇ ಸಾಲಿನಲ್ಲಿ ರಾಜ್ಯದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ತ್ರಿ-ಸ್ಟಾರ್ ಹೋಟೆಲ್ ಯೋಜನೆ ಮಂಜೂರಾಗಿದ್ದು, ವಿಜಯಪುರ ನಗರ ಹೊರವಲಯದ ಬೂತನಾಳ ಕೆರೆ ಪಕ್ಕದ ಐದು ಎಕರೆ ಪ್ರದೇಶದಲ್ಲಿ ಈ ಹೋಟೆಲ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಮೆ. ರೈಟ್ಸ್ ಸಂಸ್ಥೆಯ ಮೂಲಕ ಅಂದಾಜು 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಆಧುನಿಕ ಹೋಟೆಲ್ ಕಟ್ಟಡ ಇದೀಗ ಅಂತಿಮ ಹಂತ ತಲುಪಿದೆ.

ಸ್ಥಳ ಪರಿಶೀಲನೆ ವೇಳೆ ಜಿಲ್ಲಾಧಿಕಾರಿಗಳು ಕಂಪೌಂಡ್ ವಾಲ್ ನಿರ್ಮಾಣ ಕಾರ್ಯವನ್ನು ವೀಕ್ಷಿಸಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರು ಹಾಗೂ ಇಂಜಿನಿಯರ್ಗಳಿಗೆ ಸೂಚಿಸಿದರು.

ಹೋಟೆಲ್ಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳಾದ ವಿದ್ಯುತ್ ಸಂಪರ್ಕ, ನೀರಿನ ಸರಬರಾಜು ಹಾಗೂ ಲಿಫ್ಟ್ ವ್ಯವಸ್ಥೆಗಳನ್ನು ತಕ್ಷಣ ಕಲ್ಪಿಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹೂಗಾರ ಅವರಿಗೆ ನಿರ್ದೇಶನ ನೀಡಿದರು.

ಇದೇ ವೇಳೆ ಹೋಟೆಲ್ ಒಳಾಂಗಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಫರ್ನಿಚರ್ ವ್ಯವಸ್ಥೆ, ಸ್ಟೀಮಿಂಗ್ ಪೂಲ್ ನಿರ್ಮಾಣ ಹಾಗೂ ಸುಂದರ ಗಾರ್ಡನಿಂಗ್ ವ್ಯವಸ್ಥೆ ಕಲ್ಪಿಸಲು ಸಮಗ್ರ ಪ್ರಸ್ತಾವನೆ ಸಿದ್ಧಪಡಿಸಿ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಿಗೆ ಸಲ್ಲಿಸುವಂತೆ ಸೂಚಿಸಿದರು.

ಈ ತ್ರಿ-ಸ್ಟಾರ್ ಹೋಟೆಲ್ ಯೋಜನೆ ಪೂರ್ಣಗೊಂಡ ನಂತರ ವಿಜಯಪುರಕ್ಕೆ ಆಗಮಿಸುವ ದೇಶಿ-ವಿದೇಶಿ ಪ್ರವಾಸಿಗರಿಗೆ ಉತ್ತಮ ವಸತಿ ಹಾಗೂ ಆಧುನಿಕ ಸೌಲಭ್ಯಗಳು ದೊರೆಯಲಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ವಿಜಯಪುರ ತಹಶೀಲ್ದಾರ್ ಪ್ರಶಾಂತ ಚನ್ನಗೊಂಡ, ಕಂದಾಯ ನಿರೀಕ್ಷಕ ಸಂತೋಷ ಪಾಟಕ್, ಸರ್ವೇಯರ್ ಕಾತ್ರಾಳ, ಮಹಾಲ್ ಬಾಗಾಯತ್ ಗ್ರಾಮ ಆಡಳಿತಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ರೈಟ್ಸ್ ಸಂಸ್ಥೆಯ ಇಂಜಿನಿಯರ್ಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande