ಹಸ್ತಪ್ರತಿಗಳ ಸಮೀಕ್ಷೆಯಡಿ ಡಿಜಿಟಲೀಕರಣಕ್ಕೆ ವೇಗ
ವಿಜಯಪುರ, 13 ಮೇ (ಹಿ.ಸ.) : ಆಂಕರ್ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಕರ್ನಾಟಕದ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ಹಾಗೂ ಡಿಜಿಟಲೀಕರಣ ಕಾರ್ಯವನ್ನು ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲಾ ಇಲಾಖೆಗಳು ಹಾಗೂ ಸಂಬಂಧಿತ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿ
ಸಭೆ


ವಿಜಯಪುರ, 13 ಮೇ (ಹಿ.ಸ.) :

ಆಂಕರ್ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಕರ್ನಾಟಕದ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ಹಾಗೂ ಡಿಜಿಟಲೀಕರಣ ಕಾರ್ಯವನ್ನು ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲಾ ಇಲಾಖೆಗಳು ಹಾಗೂ ಸಂಬಂಧಿತ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ವಿವಿಧ ಭಾಗಗಳಲ್ಲಿ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಹಾಗೂ ಐತಿಹಾಸಿಕ ದಾಖಲೆಗಳು ಅನೇಕ ದೇವಾಲಯಗಳು, ಮಠಗಳು, ಮಸೀದಿಗಳು, ಗ್ರಂಥಾಲಯಗಳು ಹಾಗೂ ಖಾಸಗಿ ಸಂಗ್ರಹಗಳಲ್ಲಿ ಇನ್ನೂ ಉಳಿದುಕೊಂಡಿವೆ. ಇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗಳಿಗೆ ಉಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜ್ಞಾನ ಭಾರತಂ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅವರು ತಿಳಿಸಿದರು.

ಈ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಭ್ಯವಿರುವ ಹಸ್ತಪ್ರತಿಗಳ ಸಮೀಕ್ಷೆ ನಡೆಸಿ, ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂರಕ್ಷಣೆ ಮಾಡುವುದು, ಡಿಜಿಟಲೀಕರಣಗೊಳಿಸುವುದು, ನೋಂದಣಿ ಹಾಗೂ ವಿಮರ್ಶಾತ್ಮಕ ಸಂಪಾದನೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಸಂಗ್ರಹಿಸಲಾದ ಮಾಹಿತಿಯನ್ನು ರಾಷ್ಟ್ರೀಯ ಹಸ್ತಪ್ರತಿ ಭಂಡಾರದಲ್ಲಿ ಸಂಗ್ರಹಿಸಿ, ಸಾರ್ವಜನಿಕರಿಗೆ ಒಂದೇ ರಾಷ್ಟ್ರೀಯ ವೇದಿಕೆಯ ಮೂಲಕ ಲಭ್ಯವಾಗುವಂತೆ ಮಾಡುವ ಮಹತ್ವದ ಯೋಜನೆಯಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ವಿಶೇಷ ಅಪ್ಲಿಕೇಶನ್ ಮೂಲಕ ದೇಶದಾದ್ಯಂತ ಇರುವ ಹಸ್ತಪ್ರತಿಗಳ ವಿವರಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ಇದರಿಂದ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಅವಕಾಶ ಸಿಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈ ಯೋಜನೆಗೆ ಸಂಯೋಜಕರಾಗಿ ಕೃಷ್ಣಕೋಲಾರ ಕುಲಕರ್ಣಿ ಕಾರ್ಯನಿರ್ವಹಿಸಲಿದ್ದು, ಸದಸ್ಯರಾಗಿ ಪಂಡಿತ ಪ್ರದ್ಯುಮ್ನಾಚಾರ್ಯ ಪೂಜಾರ, ಡಾ. ವೇದನಿಧಿ ಆಚಾರ್ಯ ಹಾಗೂ ಪಂಡಿತ ಸಂಜೀವಾಚಾರ್ಯ ಮದಭಾವಿ ನೇಮಕಗೊಂಡಿದ್ದಾರೆ. ಸಂಬಂಧಿತ ಅಧಿಕಾರಿಗಳು, ದೇವಾಲಯಗಳು, ಮಠಗಳು, ಸೂಫಿ ಸಂತರು, ಮಸೀದಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಸಂಗ್ರಹ ಹೊಂದಿರುವ ಸಾರ್ವಜನಿಕರು ಹಸ್ತಪ್ರತಿಗಳ ಗುರುತುಪಡಿಸುವಿಕೆ ಮತ್ತು ಸಮೀಕ್ಷೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಎಡಿಸಿ ಮನವಿ ಮಾಡಿದರು.

ಹಸ್ತಪ್ರತಿಗಳ ದಾಖಲಾತಿ, ಪಟ್ಟಿ ಮಾಡುವಿಕೆ, ಸಂರಕ್ಷಕರಲ್ಲಿ ಜಾಗೃತಿ ಮೂಡಿಸುವಿಕೆ ಹಾಗೂ ನಿಯಮಿತ ಪ್ರಗತಿ ವರದಿ ಸಲ್ಲಿಸುವ ಕಾರ್ಯಗಳು ಸಮರ್ಪಕವಾಗಿ ನಡೆಯಬೇಕು. ಸಾರ್ವಜನಿಕರು ತಮ್ಮ ಬಳಿಯಿರುವ ಅಮೂಲ್ಯ ಪ್ರಾಚೀನ ಹಸ್ತಪ್ರತಿಗಳ ಮಾಹಿತಿಯನ್ನು ಇಲಾಖೆಗೆ ನೀಡುವ ಮೂಲಕ ಈ ಐತಿಹಾಸಿಕ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಅವರು ಕೋರಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಅರವಿಂದ ಹೂಗಾರ, ಪಂ. ಡಾ. ವೇದನಿಧಿ ಆಚಾರ್ಯ, ಪಂ. ಪ್ರದ್ಯುಮ್ನಾಚಾರ್ಯ ಪೂಜಾರ, ಪ್ರವಾಸಿ ಪ್ರಚಾರಾಧಿಕಾರಿ ಬಿ.ಎಚ್. ಕುಡಪಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande