ಬಾಬಾನಗರದಲ್ಲಿ 600 ಕೋಟಿ ರೂ. ವೆಚ್ಚದ ಬೃಹತ್ ಜಲಸಂಗ್ರಹಗಾರಕ್ಕೆ ಚುರುಕು
ವಿಜಯಪುರ, 13 ಮೇ (ಹಿ.ಸ.) : ಆಂಕರ್ : ಬೇಸಿಗೆಯ ಸಂದರ್ಭದಲ್ಲಿ ಜನರು ಹಾಗೂ ಜಾನುವಾರುಗಳು ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಿರ್ಮಾಣಗೊಳ್ಳಲಿರುವ ಬೃಹತ್ ಜಲಸಂಗ್ರಹಗಾರ ಯೋಜನೆಗೆ ಜಿಲ್ಲಾಡಳಿತ ವೇಗ ನೀಡಿದೆ. ಈ ಹಿನ್ನ
Sc


ವಿಜಯಪುರ, 13 ಮೇ (ಹಿ.ಸ.) :

ಆಂಕರ್ : ಬೇಸಿಗೆಯ ಸಂದರ್ಭದಲ್ಲಿ ಜನರು ಹಾಗೂ ಜಾನುವಾರುಗಳು ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಿರ್ಮಾಣಗೊಳ್ಳಲಿರುವ ಬೃಹತ್ ಜಲಸಂಗ್ರಹಗಾರ ಯೋಜನೆಗೆ ಜಿಲ್ಲಾಡಳಿತ ವೇಗ ನೀಡಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಬುಧವಾರ ಜಲಸಂಗ್ರಹಗಾರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಯೋಜನೆಯ ಸಂಪೂರ್ಣ ಮಾಹಿತಿ ಪಡೆದರು.

ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಜಲಸಂಗ್ರಹಗಾರವು 0.70 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದ್ದು, ಬಾಬಾನಗರ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳಿಗೆ ಬೇಸಿಗೆ ದಿನಗಳಲ್ಲಿ ಜೀವನಾಡಿಯಾಗಲಿದೆ. ಯೋಜನೆ ಕಾರ್ಯರೂಪಕ್ಕೆ ಬಂದರೆ ಕುಡಿಯುವ ನೀರಿನ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಅಂಬಣ್ಣ ಹರಳಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಯೋಜನೆಯ ವಿವರ ನೀಡಿದರು. ಬಿರು ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಹಾಗೂ ಜಾನುವಾರುಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲ ಅವರ ದೂರದೃಷ್ಟಿಯಿಂದ ಈ ಮಹತ್ವಾಕಾಂಕ್ಷಿ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾಗಿ ಗುರುತಿಸಿಕೊಂಡಿರುವ ತುಬಚಿ-ಬಬಲೇಶ್ವರ ಬೃಹತ್ ನೀರಾವರಿ ಯೋಜನೆಯಡಿ ಈ ಜಲಸಂಗ್ರಹಗಾರಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದು ವಿವರಿಸಿದರು. 545 ಎಕರೆ ಭೂಮಿ ಅಗತ್ಯ ಜಲ ಸಂಗ್ರಹಗಾರ ನಿರ್ಮಾಣಕ್ಕೆ ಒಟ್ಟು 545 ಎಕರೆ ಭೂಮಿಯ ಅವಶ್ಯಕತೆ ಇರುವುದರಿಂದ ಜಿಲ್ಲಾಧಿಕಾರಿಗಳು ನಿರ್ಮಾಣ ಪ್ರದೇಶದ ಸುತ್ತಮುತ್ತಲಿನ ಸರ್ಕಾರಿ ಜಮೀನುಗಳನ್ನು ಪರಿಶೀಲಿಸಿದರು.

ಅಗತ್ಯವಿರುವ ಭೂಮಿಯನ್ನು ಖರೀದಿಸಿ ಕರ್ನಾಟಕ ನೀರಾವರಿ ನಿಗಮಕ್ಕೆ ಹಸ್ತಾಂತರಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಭರವಸೆ ನೀಡಿದರು. ಯೋಜನೆ ಅನುಷ್ಠಾನಗೊಂಡ ಬಳಿಕ ತಿಕೋಟಾ ಭಾಗದ ಗ್ರಾಮಗಳಿಗೆ ಮಾತ್ರವಲ್ಲದೆ ಸುತ್ತಲಿನ ಅನೇಕ ಹಳ್ಳಿಗಳ ಜನರಿಗೆ ನೀರಿನ ಭದ್ರತೆ ಒದಗಲಿದ್ದು, ಜಾನುವಾರುಗಳಿಗೂ ಉಪಯೋಗವಾಗಲಿದೆ ಎಂದು ಗ್ರಾಮಸ್ಥರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ತಿಕೋಟಾ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ವಿವಿಧ ವಿಭಾಗಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಬಾಕಿಯಿರುವ ಕಡತಗಳ ಬಗ್ಗೆ ಮಾಹಿತಿ ಪಡೆದು, ಸಾರ್ವಜನಿಕರ ಕೆಲಸಗಳಲ್ಲಿ ವಿಳಂಬವಾಗದಂತೆ ಶೀಘ್ರ ವಿಲೇವಾರಿ ಮಾಡುವಂತೆ ತಹಶೀಲ್ದಾರ್ ಸುರೇಶ ಚಾವಲರ ಅವರಿಗೆ ಸೂಚನೆ ನೀಡಿದರು.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ

ನಂತರ ತಿಕೋಟಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಆರೋಗ್ಯ ವಿಚಾರಿಸಿ ಆಸ್ಪತ್ರೆಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಔಷಧಾಲಯ ಹಾಗೂ ವಿವಿಧ ವಿಭಾಗಗಳನ್ನು ಪರಿಶೀಲಿಸಿ, ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಿಕೋಟಾ ತಹಶೀಲ್ದಾರ್ ಸುರೇಶ ಚಾವಲರ, ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಅಂಬಣ್ಣ ಹರಳಯ್ಯ, ಸಣ್ಣ ನೀರಾವರಿ ಇಲಾಖೆಯ ಎಇಇ ವಿಜಯ ವಸ್ತ್ರದ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande