
ವಿಜಯಪುರ, 13 ಮೇ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ ಕಾಂಗ್ರೆಸ್ಗಿಂತ ಬಿಜೆಪಿಯೇ ಹೆಚ್ಚಿನ ಕೊಡುಗೆ ನೀಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದ್ದಾರೆ. ಈ ಕುರಿತು ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರಲು ಸಚಿವ ಡಾ. ಎಂ.ಬಿ. ಪಾಟೀಲರಿಗೆ ಅವರು ಆಹ್ವಾನ ನೀಡಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನೀರಾವರಿ ಯೋಜನೆಗಳು ಕಾಂಗ್ರೆಸ್ ಕೊಡುಗೆ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ರಾಜ್ಯದಲ್ಲಿ ನೀರಾವರಿ ಅಭಿವೃದ್ಧಿಗೆ ಗಟ್ಟಿಯಾದ ಅಡಿಪಾಯ ಹಾಕಿದ್ದು ಬಿಜೆಪಿ ಸರ್ಕಾರ. ಈ ಕುರಿತು ದಾಖಲೆಗಳೊಂದಿಗೆ ನಾವು ಚರ್ಚೆಗೆ ಸಿದ್ಧರಾಗಿದ್ದೇವೆ. ಸಚಿವರು ಸಹ ತಮ್ಮ ಸಾಧನೆಗಳನ್ನು ಜನರ ಮುಂದೆ ಸಾಬೀತುಪಡಿಸಲಿ” ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಆಡಳಿತದ ದೀರ್ಘ ಅವಧಿಯಲ್ಲೂ ನೀರಾವರಿ ಅಭಿವೃದ್ಧಿಗೆ ಅಗತ್ಯ ಆದ್ಯತೆ ನೀಡಲಾಗಲಿಲ್ಲ ಎಂದು ಆರೋಪಿಸಿದ ಅವರು, “ನೀರಾವರಿ ಪರಿಕಲ್ಪನೆಗೆ ಜೀವ ತುಂಬಿದ್ದು ಬಿಜೆಪಿ ಸರ್ಕಾರ. ಕೆರೆ ತುಂಬಿಸುವ ಯೋಜನೆಗಳು ಬಿಜೆಪಿ ಆಡಳಿತದಲ್ಲೇ ಆರಂಭಗೊಂಡವು. ರೈತರ ಬದುಕಿಗೆ ನೇರ ನೆರವಾದ ಯೋಜನೆಗಳ ಶ್ರೇಯಸ್ಸು ಬಿಜೆಪಿಗೆ ಸೇರಬೇಕು” ಎಂದರು.
ಬಬಲೇಶ್ವರ ಕ್ಷೇತ್ರದ ರಸ್ತೆ ಪರಿಸ್ಥಿತಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಂಗಡಿ, “ಅಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ವಾಹನ ಸವಾರರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಒಂದು ಸಮರ್ಪಕ ರಸ್ತೆ ನಿರ್ಮಾಣವೂ ಆಗಿಲ್ಲ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಿದೆ” ಎಂದು ದೂರಿದರು.
ರಾಜ್ಯ ಸರ್ಕಾರ ಆರ್ಥಿಕವಾಗಿ ದುರ್ಬಲ ಸ್ಥಿತಿಗೆ ತಲುಪಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ ಅವರು, “ಕಾಂಗ್ರೆಸ್ ಪಕ್ಷದ ಕೊನೆಗಾಲ ವಿಜಯಪುರ ಜಿಲ್ಲೆಯಿಂದಲೇ ಆರಂಭವಾಗಲಿದೆ” ಎಂದು ಭವಿಷ್ಯ ನುಡಿದರು.
ಇಂಡಿ ಶಾಸಕರ ಹೇಳಿಕೆ ಖಂಡನೀಯ
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಗುರುಲಿಂಗಪ್ಪ ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.
“ಮೋದಿ ಅವರ ಆಡಳಿತದಲ್ಲಿ ದೇಶದ ಭವಿಷ್ಯ ಉಜ್ವಲವಾಗಿದೆ. ಇಡೀ ವಿಶ್ವವೇ ಅವರ ನಾಯಕತ್ವವನ್ನು ಮೆಚ್ಚಿದೆ. ಮೋದಿ ಅಭಿಮಾನಿಗಳನ್ನು ಅಂಧಭಕ್ತರು ಎಂದು ಕರೆಯುವುದು ಸರಿಯಲ್ಲ. ದೇಶದ ಘನತೆಗೆ ಧಕ್ಕೆ ಉಂಟುಮಾಡುವ ರಾಹುಲ್ ಗಾಂಧಿ ಅವರ ಅಭಿಮಾನಿಗಳೇ ಅಂಧಭಕ್ತರು” ಎಂದು ತಿರುಗೇಟು ನೀಡಿದರು.
ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಅನುದಾನ ನೀಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಯತ್ನಾಳರ ಕ್ಷೇತ್ರಕ್ಕೂ ಸಮರ್ಪಕ ಅನುದಾನ ನೀಡಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ, “ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಕಾಲುವೆ ದುರಸ್ತಿ ಕೇಂದ್ರ ಸರ್ಕಾರದ ಹೊಣೆ ಎಂದು ಹೇಳುವುದು ಬಾಲಿಶ ಹೇಳಿಕೆ” ಎಂದು ಟೀಕಿಸಿದರು.
ಜನತೆ ಅಭಿವೃದ್ಧಿ ಕೊರತೆಯ ಬಗ್ಗೆ ಪ್ರಶ್ನಿಸುತ್ತಿರುವ ಒತ್ತಡದಿಂದ ಕಾಂಗ್ರೆಸ್ ನಾಯಕರು ವಿವೇಚನೆಯಿಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಿ.ಜಿ. ಬಿರಾದಾರ, ಈರಣ್ಣ ರಾವೂರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande