
ವಿಜಯಪುರ, 12 ಮೇ (ಹಿ.ಸ.) :
ಆಂಕರ್ : ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರೊಂದಿಗೆ ಸಮಾನವಾಗಿ ಜೀವ ಉಳಿಸುವ ಮಹತ್ತರ ಹೊಣೆ ಹೊತ್ತಿರುವ ದಾದಿಯರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 12ರಂದು ವಿಶ್ವ ದಾದಿಯರ ದಿನವನ್ನು ಆಚರಿಸಲಾಗುತ್ತದೆ.
ಆಧುನಿಕ ನರ್ಸಿಂಗ್ ಸೇವೆಯ ಪಿತಾಮಹಿಯಾಗಿ ಖ್ಯಾತರಾಗಿರುವ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಅಂಗವಾಗಿ ಈ ದಿನವನ್ನು ವಿಶ್ವದಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಪ್ರಕಟಣೆ ಮೂಲಕ ಶುಭಾಶಯ ಕೋರಿದ್ದಾರೆ.
ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವ ರೋಗಿಗಳ ಆರೈಕೆಯಲ್ಲಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ಫ್ಲಾರೆನ್ಸ್ ನೈಟಿಂಗೇಲ್ ಅವರು ಮಾನವತೆಯ ಪ್ರತೀಕವಾಗಿದ್ದರು. ಅವರ ಆದರ್ಶಗಳು ಇಂದಿಗೂ ದಾದಿಯರ ಸೇವಾಭಾವದಲ್ಲಿ ಜೀವಂತವಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ ದಿಕ್ಕು ತೋರಿಸುತ್ತಿವೆ.
ದಾದಿಯರು ಆಸ್ಪತ್ರೆಗಳ ನಿಜವಾದ ಆಶಾಕಿರಣಗಳಾಗಿದ್ದು, ರೋಗಿಗಳ ನೋವನ್ನು ಅರ್ಥಮಾಡಿಕೊಂಡು ಅವರನ್ನು ಸಾಂತ್ವನಪಡಿಸುವ ಕಾರ್ಯ ಮಾಡುತ್ತಾರೆ.
ತಮ್ಮ ಕುಟುಂಬವನ್ನು ಬಿಟ್ಟು ಹಗಲು-ರಾತ್ರಿ ಎನ್ನದೆ ಸೇವೆಯಲ್ಲಿ ತೊಡಗಿರುವ ದಾದಿಯರ ತ್ಯಾಗ, ಸಹನೆ ಮತ್ತು ಕರುಣೆ ಸಮಾಜಕ್ಕೆ ಮಾದರಿಯಾಗಿದೆ.
ವಿಶೇಷವಾಗಿ ತುರ್ತು ಪರಿಸ್ಥಿತಿಗಳು, ಮಹಾಮಾರಿ ಸಂದರ್ಭಗಳು ಹಾಗೂ ಅಪಘಾತಗಳ ವೇಳೆ ದಾದಿಯರ ಸೇವೆ ಅತ್ಯಂತ ಮಹತ್ವದ್ದಾಗಿರುತ್ತದೆ.
ಕೇವಲ ಔಷಧೋಪಚಾರಕ್ಕೆ ಸೀಮಿತವಾಗದೆ, ರೋಗಿಗಳಿಗೆ ಮಾನಸಿಕ ಧೈರ್ಯ ತುಂಬುವಲ್ಲಿ ದಾದಿಯರು ಪ್ರಮುಖ ಪಾತ್ರವಹಿಸುತ್ತಾರೆ.
ಅವರ ನಗುಮುಖದ ಸೇವೆ ಅನೇಕ ರೋಗಿಗಳಿಗೆ ಹೊಸ ಬದುಕಿನ ವಿಶ್ವಾಸ ನೀಡುತ್ತದೆ. ಈ ಕಾರಣಕ್ಕೇ ದಾದಿಯರನ್ನು ಆರೋಗ್ಯ ಕ್ಷೇತ್ರದ ಜೀವನಾಡಿ ಎಂದು ಕರೆಯಲಾಗುತ್ತದೆ. ವಿಶ್ವ ದಾದಿಯರ ದಿನದ ಅಂಗವಾಗಿ ವಿವಿಧ ಆಸ್ಪತ್ರೆಗಳು ಹಾಗೂ ಆರೋಗ್ಯ ಸಂಸ್ಥೆಗಳಲ್ಲಿ ದಾದಿಯರ ಸೇವೆಯನ್ನು ಗೌರವಿಸುವ ಕಾರ್ಯಕ್ರಮಗಳು ನಡೆಯುತ್ತಿವೆ.
ಸಮಾಜದ ವಿವಿಧ ವಲಯಗಳ ಮುಖಂಡರು ಹಾಗೂ ಸಾರ್ವಜನಿಕರು ದಾದಿಯರ ನಿಸ್ವಾರ್ಥ ಸೇವೆಯನ್ನು ಕೊಂಡಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಜೀವ ಉಳಿಸುವ ಪವಿತ್ರ ಕಾರ್ಯದಲ್ಲಿ ನಿರಂತರವಾಗಿ ತೊಡಗಿರುವ ಎಲ್ಲಾ ದಾದಿಯರಿಗೂ ವಿಶ್ವ ದಾದಿಯರ ದಿನದ ಹಾರ್ದಿಕ ಶುಭಾಶಯಗಳು ಸಲ್ಲುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande