
ಬಾಗಲಕೋಟೆ, 12 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ಹಿರಿಯ ಕಾಂಗ್ರೆಸ್ ಮುಖಂಡರು, ಬಸವೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕರು ಹಾಗೂ ಮಾಜಿ ಪಟ್ಟಣ ಪಂಚಾಯತ್ ಸದಸ್ಯರಾಗಿದ್ದ ಸಂಗಪ್ಪ ಹೂಲಗೇರಿ ಅವರು ಅನಾರೋಗ್ಯದಿಂದ ವಿಧಿವಶರಾದ ಸುದ್ದಿ ತಿಳಿದು ಹುನಗುಂದ ಭಾಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಸಾಮಾಜಿಕ, ರಾಜಕೀಯ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಸಂಗಪ್ಪ ಹೂಲಗೇರಿ ಅವರು ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ, ಸರಳ ವ್ಯಕ್ತಿತ್ವ ಹಾಗೂ ಸ್ನೇಹಪರ ನಡೆಗಳಿಂದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಹುನಗುಂದ ಪಟ್ಟಣದ ಸಾರ್ವಜನಿಕ ಬದುಕಿನಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು.
ಈ ಕುರಿತು ಎಸ್.ಆರ್. ನವಲಿ ಹಿರೇಮಠ ಸಂಸ್ಥಾಪಕ ಅಧ್ಯಕ್ಷರು ಹಾಗೂ ಎಸ್ಆರ್ಎನ್ ಈ ಫೌಂಡೇಶನ್ ಇಳಕಲ್–ಹುನಗುಂದದ ಅಧ್ಯಕ್ಷರಾದ ಎಸ್.ಆರ್. ನವಲಿ ಹಿರೇಮಠ ಅವರು ಸಂತಾಪ ಸೂಚಿಸಿ ಮಾತನಾಡಿ, “ಸಂಗಪ್ಪ ಹೂಲಗೇರಿ ಅವರು ಹಲವು ದಶಕಗಳಿಂದ ನನ್ನೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಂಡು ಜನರ ನಡುವೆ ಬೆರೆತು ಬದುಕಿದ ಅಪರೂಪದ ವ್ಯಕ್ತಿತ್ವ ಅವರದು.
ಸಾರ್ವಜನಿಕ ಬದುಕಿನಲ್ಲಿ ಎಲ್ಲರೊಂದಿಗೆ ಉತ್ತಮ ಸ್ನೇಹ ಸಂಪಾದಿಸಿದ್ದ ಅವರು ಹಠಾತ್ ನಮ್ಮನ್ನಗಲಿರುವುದು ತುಂಬಾ ನೋವು ತಂದಿದೆ” ಎಂದು ತಿಳಿಸಿದ್ದಾರೆ.
ಹೂಲಗೇರಿ ಅವರ ಅಗಲಿಕೆಯಿಂದ ಕುಟುಂಬಸ್ಥರು, ಬಂಧು ಬಳಗ ಹಾಗೂ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande