ಉರಿ ಬಿಸಿಲಿನಿಂದ ಕಂಗೆಟ್ಟ ಜನರಿಗೆ ತಂಪೆರೆದ ಮಳೆರಾಯ
ಗದಗ, 12 ಮೇ (ಹಿ.ಸ.) : ಆ್ಯಂಕರ್ : ಕಳೆದ ಹಲವು ದಿನಗಳಿಂದ ಉರಿ ಬಿಸಿಲಿನಿಂದ ಕಂಗೆಟ್ಟಿದ್ದ ಗದಗ ಜಿಲ್ಲೆಯ ಜನರಿಗೆ ಮಂಗಳವಾರ ಸಂಜೆ ಸುರಿದ ಭಾರಿ ಮಳೆ ತಂಪಿನ ಅನುಭವ ನೀಡಿತು. ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ಮಳೆಯಾದರೆ, ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಳೆರಾಯ ಅಬ್ಬರಿಸಿ
ಫೋಟೋ


ಗದಗ, 12 ಮೇ (ಹಿ.ಸ.) :

ಆ್ಯಂಕರ್ : ಕಳೆದ ಹಲವು ದಿನಗಳಿಂದ ಉರಿ ಬಿಸಿಲಿನಿಂದ ಕಂಗೆಟ್ಟಿದ್ದ ಗದಗ ಜಿಲ್ಲೆಯ ಜನರಿಗೆ ಮಂಗಳವಾರ ಸಂಜೆ ಸುರಿದ ಭಾರಿ ಮಳೆ ತಂಪಿನ ಅನುಭವ ನೀಡಿತು. ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ಮಳೆಯಾದರೆ, ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಳೆರಾಯ ಅಬ್ಬರಿಸಿ ಸುರಿದನು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿದ ಮಳೆಯಿಂದ ರಸ್ತೆಗಳ ಮೇಲೆ ನೀರು ಹರಿದು ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು. ಬಿಸಿಲಿನ ತಾಪಮಾನದಿಂದ ಬೇಸತ್ತಿದ್ದ ಜನರು ಮಳೆಯ ಸೊಗಡನ್ನು ಸವಿದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ 38 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಧ್ಯಾಹ್ನ ವೇಳೆಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ ಮಂಗಳವಾರ ಸಂಜೆ ಏಕಾಏಕಿ ಮೋಡ ಕವಿದು ಗಾಳಿ, ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆಯು ವಾತಾವರಣವನ್ನು ತಂಪುಗೊಳಿಸಿತು. ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಮಳೆಯಿಂದ ತಾತ್ಕಾಲಿಕ ಆಶ್ರಯ ಪಡೆಯುವ ದೃಶ್ಯ ಕಂಡುಬಂದಿತು.

ಇನ್ನೊಂದೆಡೆ, ಮಳೆಯು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಪೂರ್ವ ಮಳೆಯು ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾಗಿದ್ದು, ಬಿತ್ತನೆ ಸಿದ್ಧತೆಗೆ ಸಹಕಾರಿಯಾಗಲಿದೆ ಎಂಬ ಆಶಾಭಾವನೆ ರೈತರು ವ್ಯಕ್ತಪಡಿಸಿದರು.

ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಕೆಲ ದಿನಗಳವರೆಗೆ ಜಿಲ್ಲೆಯಲ್ಲಿ ಗುಡುಗು-ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande